ADVERTISEMENT

China Hits Back US: ಅಮೆರಿಕದ ಮೇಲಿನ ಸುಂಕ ಹೆಚ್ಚಿಸಿದ ಚೀನಾ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 13:55 IST
Last Updated 9 ಏಪ್ರಿಲ್ 2025, 13:55 IST
<div class="paragraphs"><p>ಅಮೆರಿಕದ ಮೇಲಿನ ಸುಂಕ ಹೆಚ್ಚಿಸಿದ ಚೀನಾ</p></div>

ಅಮೆರಿಕದ ಮೇಲಿನ ಸುಂಕ ಹೆಚ್ಚಿಸಿದ ಚೀನಾ

   

ಬ್ಯಾಂಕಾಕ್/ವಾಷಿಂಗ್ಟನ್‌: ಅಮೆರಿಕದ ಜೊತೆಗಿನ ವಾಣಿಜ್ಯ ಸಮರದಲ್ಲಿ ‘ಕೊನೆಯವರೆಗೂ ಹೋರಾಟ ನಡೆಸುವುದಾಗಿ’ ಚೀನಾ ಹೇಳಿದೆ. ಅಮೆರಿಕದಿಂದ ಆಮದಾಗುವ ಸರಕುಗಳ ಮೇಲೆ ತೆರಿಗೆ ಪ್ರಮಾಣವನ್ನು ಗುರುವಾರದಿಂದ ಶೇಕಡ 84ಕ್ಕೆ ಹೆಚ್ಚಿಸುವುದಾಗಿ ತಿಳಿಸಿದೆ.

ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಒಟ್ಟು ಶೇ 104ರಷ್ಟು ತೆರಿಗೆ ಹೇರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿದ ನಂತರದಲ್ಲಿ ಹಲವು ಕ್ರಮಗಳನ್ನು ಚೀನಾ ಕೈಗೊಂಡಿದೆ. ಅಲ್ಲದೆ, ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಅಮೆರಿಕದ ವಿರುದ್ಧ ಹೆಚ್ಚುವರಿಯಾಗಿ ಅರ್ಜಿಯೊಂದನ್ನು ಸಲ್ಲಿಸುವುದಾಗಿ ತಿಳಿಸಿದೆ. ಅಮೆರಿಕದ ಕಂಪನಿಗಳು ಚೀನಾದ ಕಂಪನಿಗಳ ಜೊತೆ ವಹಿವಾಟು ನಡೆಸುವುದಕ್ಕೆ ಇನ್ನಷ್ಟು ನಿರ್ಬಂಧಗಳನ್ನು ವಿಧಿಸಿದೆ.

ADVERTISEMENT

‘ಆರ್ಥಿಕ ಹಾಗೂ ವ್ಯಾಪಾರ ನಿರ್ಬಂಧಗಳನ್ನು ಹೆಚ್ಚಿಸುವ ವಿಚಾರವಾಗಿ ಅಮೆರಿಕವು ಹಟಮಾರಿತನ ತೋರಿಸಿದರೆ, ಅದಕ್ಕೆ ಎದುರಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಸಾಕಷ್ಟು ಮಾರ್ಗಗಳು ಹಾಗೂ ಪ್ರಬಲ ಇಚ್ಛಾಶಕ್ತಿಯು ಚೀನಾಕ್ಕೆ ಇದೆ’ ಎಂದು ಚೀನಾದ ವಾಣಿಜ್ಯ ಸಚಿವಾಲಯವು ಹೇಳಿದೆ.

ಅಮೆರಿಕದ ಜೊತೆ ಮಾತುಕತೆ ನಡೆಸುವ ಇರಾದೆಯನ್ನು ಚೀನಾ ಇದುವರೆಗೆ ತೋರಿಲ್ಲ. ‘ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ನಿಜವಾದ ಬಯಕೆ ಅಮೆರಿಕಕ್ಕೆ ಇದ್ದರೆ ಅದು ಸಮಾನತೆಯ, ಗೌರವದ ಹಾಗೂ ಪರಸ್ಪರರಿಗೆ ಪ್ರಯೋಜನ ಮಾಡಿಕೊಡುವ ಧೋರಣೆಯನ್ನು ಅನುಸರಿಸಬೇಕು’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಬುಧವಾರ ಹೇಳಿದ್ದಾರೆ.

ಸಣ್ಣ ಪೊಟ್ಟಣದ ವಸ್ತುಗಳ ಮೇಲಿನ ತೆರಿಗೆ ಶೇ 90ಕ್ಕೆ ಏರಿಕೆ

ಚೀನಾದಿಂದ ಅಮೆರಿಕಕ್ಕೆ ಸಣ್ಣ ಪೊಟ್ಟಣಗಳಲ್ಲಿ ಕಳುಹಿಸುವ ವಸ್ತುಗಳ ಮೇಲಿನ ತೆರಿಗೆಯ ಪ್ರಮಾಣವು ಶೇ 30ರಷ್ಟು ಇರುವುದನ್ನು ಶೇ 90ಕ್ಕೆ ಹೆಚ್ಚಿಸುವ ಆದೇಶಕ್ಕೆ ಟ್ರಂಪ್ ಸಹಿ ಮಾಡಿದ್ದಾರೆ. ಅಮೆರಿಕದಲ್ಲಿ ಜನಪ್ರಿಯವಾಗಿರುವ ಅಗ್ಗದ ಬೆಲೆಯ ಕೆಲವು ಉತ್ಪನ್ನಗಳ ಆಮದಿನಲ್ಲಿ ಈ ಕ್ರಮದಿಂದಾಗಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಟ್ರಂಪ್ ಅವರ ಹೊಸ ಆದೇಶವು ಮೇ 2ರಿಂದ ಜಾರಿಗೆ ಬರಲಿದೆ. 800 ಡಾಲರ್‌ಗಿಂತ ಕಡಿಮೆ ಬೆಲೆಯ ಉತ್ಪನ್ನಗಳು ಚೀನಾದಿಂದ ಅಮೆರಿಕ ಪ್ರವೇಶಿಸಿದಾಗ ಸಿಗುತ್ತಿದ್ದ ಸುಂಕ ವಿನಾಯಿತಿಯನ್ನು ರದ್ದುಪಡಿಸುವ ಕ್ರಮಕ್ಕೆ ಟ್ರಂಪ್ ಕಳೆದ ವಾರ ಸಹಿ ಮಾಡಿದ್ದರು. ಚೀನಾದಿಂದ ಸುಂಕ ವಿನಾಯಿತಿಯ ಪ್ರಯೋಜನ ಪಡೆದು ಆಮದಾಗುತ್ತಿದ್ದ ಉತ್ಪನ್ನಗಳ ಮೇಲಿನ ಸುಂಕದ ಪ್ರಮಾಣವನ್ನು ಶೇ 30ಕ್ಕೆ (ಅಥವಾ 25 ಡಾಲರ್‌ಗೆ) ಹೆಚ್ಚಿಸುವುದಾಗಿ ಅಮೆರಿಕದ ಅಧಿಕಾರಿಗಳು ಕಳೆದ ವಾರ ಹೇಳಿದ್ದರು. ಆದರೆ ಈಗ ಆಮದು ಸುಂಕವನ್ನು ಇನ್ನಷ್ಟು ಹೆಚ್ಚಿಸಿರುವ ಅಮೆರಿಕವು ಅದನ್ನು ಶೇ 90ಕ್ಕೆ ತಂದಿರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.