ADVERTISEMENT

ಚೀನಾ: ರೋಗದ ಲಕ್ಷಣವೇ ಇಲ್ಲದ ಸೋಂಕಿತರು, ಕೊರೊನಾ ಸೋಂಕಿನ ಇನ್ನೊಂದು ಅಲೆ?

ಪಿಟಿಐ
Published 1 ಏಪ್ರಿಲ್ 2020, 20:00 IST
Last Updated 1 ಏಪ್ರಿಲ್ 2020, 20:00 IST
ಕೊರೊನಾ ವೈರಸ್
ಕೊರೊನಾ ವೈರಸ್   

ಬೀಜಿಂಗ್‌: ಹೊರಗಡೆ ರೋಗದ ಲಕ್ಷಣಗಳನ್ನು ತೋರಿಸದಂಥ, 1,541 ಮಂದಿ ಕೋವಿಡ್‌–19 ರೋಗಿಗಳು ದೇಶದಲ್ಲಿದ್ದಾರೆ ಎಂದು ಚೀನಾ ಬುಧವಾರ ಹೇಳಿದೆ.

ಕಟ್ಟುನಿಟ್ಟಿನ ಕ್ರಮಗಳ ಮೂಲಕ ಕೋವಿಡ್‌–19 ಅನ್ನು ನಿಯಂತ್ರಿಸಿದ್ದ ಚೀನಾ, ಇತ್ತೀಚೆಗಷ್ಟೇ ನಿರ್ಬಂಧಗಳನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಿತ್ತು. ಈಗ ಹೊಸ ರೀತಿಯ ರೋಗಿಗಳು ಪತ್ತೆಯಾಗಿರುವುದು ಚಿಂತೆಗೆ ಕಾರಣವಾಗಿದೆ. ರೋಗ ಲಕ್ಷಣಗಳನ್ನು ತೋರಿಸದೆಯೇ ಕೊರೊನಾ ವೈರಸ್‌ನ ವಾಹಕರಾಗುತ್ತಿರುವ ಇಂಥ ರೋಗಿಗಳು ಇನ್ನೊಂದು ಸುತ್ತಿನ ಸೋಂಕಿನ ಅಲೆಯನ್ನು ಎಬ್ಬಿಸಬಹುದೆಂಬ ಭೀತಿ ಉಂಟಾಗಿದೆ.

‘ಸೋಂಕು ಕಾಣಿಸಿದ 1,541 ಮಂದಿಯ ಮೇಲೆ ವೈದ್ಯಕೀಯ ನಿಗಾ ಇರಿಸಲಾಗಿದೆ. ಇವರಲ್ಲಿ 205 ಮಂದಿ ವಿದೇಶ ಪ್ರಯಾಣ ಮಾಡಿದವರಿದ್ದಾರೆ. ಇಂಥ ರೋಗಿಗಳನ್ನು ಕುರಿತ ಮಾಹಿತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು’ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ತಿಳಿಸಿದೆ.

ADVERTISEMENT

‘ಫೆಬ್ರುವರಿ ಅಂತ್ಯದ ವೇಳೆಗೆ ಚೀನಾದಲ್ಲಿ ಇಂಥ 43,000 ಮಂದಿ ಸೋಂಕಿತರಿರುವುದು ದೃಢಪಟ್ಟಿತ್ತು. ರೋಗ ಲಕ್ಷಣಗಳು ಕಾಣಿಸಲಿಲ್ಲ ಎಂಬ ಕಾರಣಕ್ಕೆ ಸೋಂಕು ದೃಢಪಟ್ಟವರ ಅಧಿಕೃತ ಪಟ್ಟಿಗೆ ಇವರನ್ನು ಸೇರಿಸಿರಲಿಲ್ಲ. ಪಟ್ಟಿಗೆ ಯಾಕೆ ಸೇರಿಸಲಿಲ್ಲ ಎಂಬ ಬಗ್ಗೆ ಸರ್ಕಾರ ಸ್ಪಷ್ಟನೆಯನ್ನೂ ನೀಡಲಿಲ್ಲ’ ಎಂದು ಹಾಂಗ್‌ಕಾಂಗ್‌ನ ಪತ್ರಿಕೆಯೊಂದು ವರದಿ ಮಾಡಿದೆ.

‘ರೋಗಾಣು ವಾಹಕರಾಗಿರುವ ಇಂಥವರಿಂದ ಪುನಃ ಸೋಂಕು ಪಸರಿಸುವ ಅಪಾಯವಿದೆ. ಆದ್ದರಿಂದ ಅಂಥವರನ್ನು ಕುರಿತ ಮಾಹಿತಿಯನ್ನು ಬಹಿರಂಗಪಡಿಸಲು ತೀರ್ಮಾನಿಸಲಾಗಿದೆ. ಇಂಥ ಸೋಂಕಿತರು ಮತ್ತು ಅವರ ಸಮೀಪದ ಸಂಪರ್ಕಕ್ಕೆ ಬಂದಿರುವವರನ್ನು ಸರ್ಕಾರ ರೂಪಿಸಿರುವ ಪ್ರತ್ಯೇಕ ವಾಸದ ಸ್ಥಳದಲ್ಲಿ 14 ದಿನಗಳ ಕಾಲ ಇರಿಸಲಾಗುವುದು. ಸೋಂಕು ಇಲ್ಲ ಎಂಬುದು ಪರೀಕ್ಷೆಯಿಂದ ದೃಢಪಟ್ಟ ಬಳಿಕವೇ ಹೊರಗೆ ಕಳುಹಿಸಲಾಗುವುದು’ ಎಂದು ಎನ್‌ಎಚ್‌ಸಿಯ ರೋಗ ನಿಯಂತ್ರಣ ಬ್ಯೂರೊ ಮುಖ್ಯಸ್ಥ ಚಾಂಗ್‌ ಜೈಲೆ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಕೆಂದ್ರಬಿಂದುವಾಗಿದ್ದ ವುಹಾನ್‌ ನಗರದಲ್ಲಿ ರೋಗವು ನಿಯಂತ್ರಣಕ್ಕೆ ಬಂದ ಬಳಿಕ ಅಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಸ್ವಲ್ಪಮಟ್ಟಿಗೆ ಸಡಿಲಿಸಲಾಗಿತ್ತು. ಹಲವು ದಿನಗಳ ಕಾಲ ಮುಚ್ಚಿದ್ದ ಅಲ್ಲಿನ ಕೈಗಾರಿಕೆಗಳು ಹಾಗೂ ವ್ಯಾಪಾರ ಚಟುವಟಿಕೆಗಳು ಮತ್ತೆ ಸಹಜ ಸ್ಥಿತಿಗೆ ಮರಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.