ADVERTISEMENT

ವಿದೇಶಾಂಗ ಸಚಿವರ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಚೀನಾ, ರಷ್ಯಾ

ಏಜೆನ್ಸೀಸ್
Published 23 ಮಾರ್ಚ್ 2021, 7:30 IST
Last Updated 23 ಮಾರ್ಚ್ 2021, 7:30 IST
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ   

ಬೀಜಿಂಗ್:‌ ಮಾನವ ಹಕ್ಕುಗಳ ವಿಷಯದಲ್ಲಿ ಟೀಕೆಗಳು ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧದ ನಡುವೆಯೂ ಮಂಗಳವಾರ ಇಲ್ಲಿ ನಡೆದ ವಿದೇಶಾಂಗ ಸಚಿವರ ಸಭೆಯಲ್ಲಿ ರಷ್ಯಾ ಮತ್ತು ಚೀನಾ ವಿದೇಶಾಂಗ ಸಚಿವರು ಒಗ್ಗಟ್ಟು ಪ್ರದರ್ಶಿಸಿದರು.

ತಮ್ಮ ದೇಶಗಳ ಸಾರ್ವಭೌಮ ರಾಜಕೀಯ ವ್ಯವಸ್ಥೆಯೊಳಗೆ ಹೊರದೇಶಗಳು ಮೂಗು ತೂರಿಸುವುದನ್ನು ತಿರಸ್ಕರಿಸಿದ ಚೀನಾ ಮತ್ತು ರಷ್ಯಾ ವಿದೇಶಾಂಗ ಸಚಿವರಾದ ವಾಂಗ್ ಯೀ ಮತ್ತು ಸರ್ಗೈ ಲಾವ್ರೋವ್, ಹವಾಮಾನ ಬದಲಾವಣೆಯಿಂದ ಹಿಡಿದು ಕೊರೊನಾ ಸಾಂಕ್ರಾಮಿಕದವರೆಗೆ ಎಲ್ಲಾ ವಿಷಯಗಳಲ್ಲಿ ಜಾಗತಿಕವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ದಕ್ಷಿಣ ಚೀನಾದ ನಗರ ನ್ಯಾನಿಂಗ್‌ನಲ್ಲಿ ಸೋಮವಾರ ನಡೆದ ಆರಂಭಿಕ ಸಭೆಯಲ್ಲಿ ವಾಂಗ್ ಮತ್ತು ಲಾವ್ರೊವ್ ಅವರು, ‘ ಬೇರೆ ಬೇರೆ ದೇಶಗಳ ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ‘ ಎಂದು ಆರೋಪಿಸಿದರು. ಇರಾನ್‌ ಜತೆಗಿನ ಅಣ್ವಸ್ತ್ರ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದು, ಈ ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳುವಂತೆ ಅಮೆರಿಕವನ್ನು ಒತ್ತಾಯಿಸಿದರು.

ADVERTISEMENT

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಭಯ ರಾಷ್ಟ್ರಗಳ ಸಚಿವರು, ಚೀನಾದ ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಚೀನಾದ ಅಧಿಕಾರಿಗಳ ವಿರುದ್ಧ ಐರೋಪ್ಯ ಒಕ್ಕೂಟ, ಬ್ರಿಟನ್, ಕೆನಡಾ ಮತ್ತು ಅಮೆರಿಕ ಜಾರಿಗೊಳಿಸಿರುವ ಸಂಘಟಿತ ನಿರ್ಬಂಧಗಳನ್ನು ವಾಂಗ್ ತೀವ್ರವಾಗಿ ಖಂಡಿಸಿದರು.

‘ಎಲ್ಲ ರೀತಿಯ ಏಕಪಕ್ಷೀಯ ನಿರ್ಧಾರಗಳನ್ನು ವಿರೋಧಿಸಲು ಎಲ್ಲ ದೇಶಗಳು ಒಗ್ಗಟ್ಟಾಗಿ ನಿಲ್ಲಬೇಕು‘ ಎಂದು ವಾಂಗ್‌ ಹೇಳಿದರು. ‘ಇಂಥ ಕ್ರಮಗಳಿಂದ ಅಂತರರಾಷ್ಟ್ರೀಯ ಸಮುದಾಯಕ್ಕೆ ಮುಜುಗರ ಉಂಟಾಗುವಂತೆ ಮಾಡಬಾರದು‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.