ADVERTISEMENT

ಗಡಿ ವಿವಾದ ಬಗೆಹರಿಸಲು ಬದ್ಧ: ಚೀನಾ

ಉಭಯ ದೇಶಗಳ ಸೇನಾಧಿಕಾರಿಗಳ ಮಾತುಕತೆ ಇಂದು

ಪಿಟಿಐ
Published 5 ಜೂನ್ 2020, 19:30 IST
Last Updated 5 ಜೂನ್ 2020, 19:30 IST
   

ಬೀಜಿಂಗ್‌: ಗಡಿ ವಿವಾದ ಸೇರಿದಂತೆ ಭಾರತದೊಂದಿಗಿನ ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತಾನು ಬದ್ಧ ಎಂದು ಚೀನಾ ಶುಕ್ರವಾರ ಹೇಳಿದೆ.

ಲಡಾಖ್‌ನ ಪೂರ್ವ ಗಡಿಯಲ್ಲಿ ಎರಡೂ ದೇಶಗಳ ಯೋಧರ ನಡುವೆ ಸಂಘರ್ಷ ನಡೆದ ನಂತರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳ ನಡುವೆ ಶನಿವಾರ (ಜೂನ್‌ 6) ಮಾತುಕತೆ ನಿಗದಿಯಾದ ಬೆನ್ನಲ್ಲೇ ಚೀನಾದಿಂದ ಈ ಹೇಳಿಕೆ ಹೊರಬಿದ್ದಿದೆ.

‘ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

ಎರಡೂ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿರುವ ಕುರಿತ ಪ್ರಶ್ನೆಗೆ, ‘ಗಡಿ ವಿಷಯಕ್ಕೆ ಸಂಬಂಧಿಸಿದಂತೆ ವ್ಯವಸ್ಥಿತವಾದ ಕಾರ್ಯವಿಧಾನ ಹೊಂದಿದ್ದೇವೆ. ಈ ವಿಷಯ ಕುರಿತು ಸೇನೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ನಿಗಾವಹಿಸುತ್ತೇವೆ’ ಎಂದರು.

ಲೆ.ಜ.ಹರಿಂದರ್‌ ಸಿಂಗ್‌ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಪಾಂಗ್‌ಯಾಂಗ್‌ ಸರೋವರ, ಗಾಲ್ವನ್‌ ಕಣಿವೆ ಹಾಗೂ ಡೆಮ್‌ಚೋಕ್‌ ಪ್ರದೇಶದಲ್ಲಿ ಉದ್ಭವಿಸಿರುವ ಉದ್ವಿಗ್ನತೆಯನ್ನು ಶಮನ ಮಾಡುವ ಸಂಬಂಧ ಭಾರತದ ನಿಯೋಗ ಕೆಲವು ಪ್ರಸ್ತಾವಗಳನ್ನು ಮುಂದಿಡಲಿದೆ ಎಂಬ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

‘ಪ್ರಸ್ತಾವಗಳು ಏನಿರಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ಈ ಮೂರು ಪ್ರದೇಶಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಬಗ್ಗೆ ಭಾರತದ ನಿಯೋಗ ಒತ್ತಡ ಹೇರುವ ನಿರೀಕ್ಷೆ ಇದೆ‘ ಎಂದು ಇವೇ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.