ADVERTISEMENT

ಭಾರತದ ವಿರುದ್ಧ ಪಾಕ್ ಬಳಕೆಗೆ ಬಗ್ರಾಮ್ ವಾಯುನೆಲೆ ವಶಕ್ಕೆ ಚೀನಾ ಯತ್ನ: ನಿಕ್ಕಿ

ಪಿಟಿಐ
Published 2 ಸೆಪ್ಟೆಂಬರ್ 2021, 19:36 IST
Last Updated 2 ಸೆಪ್ಟೆಂಬರ್ 2021, 19:36 IST
ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ
ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ   

ವಾಷಿಂಗ್ಟನ್: ತಾಲಿಬಾನ್ ವಶದಲ್ಲಿರುವ ಅಫ್ಗಾನಿಸ್ತಾನದ ಬಗ್ರಾಮ್ ವಾಯುನೆಲೆಯನ್ನು ಚೀನಾ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಅಮೆರಿಕ ಈ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ಅಮೆರಿಕ ಮಾಜಿ ರಾಜತಾಂತ್ರಿಕ ಅಧಿಕಾರಿ ನಿಕ್ಕಿ ಹ್ಯಾಲೆ ಎಚ್ಚರಿಸಿದ್ದಾರೆ. ಪಾಕಿಸ್ತಾನವನ್ನು ಬಲಪಡಿಸಿ, ಅದನ್ನು ಭಾರತದ ವಿರುದ್ಧ ಎತ್ತಿಕಟ್ಟಲೂ ಚೀನಾ ಮುಂದಾಗಬಹುದು ಎಂದು ಅವರು ಹೇಳಿದ್ದಾರೆ.

ಅಮೆರಿಕದ ಸಾವಿರಾರು ಸೈನಿಕರಿಗೆ ನೆಲೆಯಾಗಿದ್ದ ಬಗ್ರಾಮ್ ವಾಯುನೆಲೆಯನ್ನು 20 ವರ್ಷಗಳ ಬಳಿಕ ಅಮೆರಿಕವು ಜುಲೈನಲ್ಲಿ ತೆರವು ಮಾಡಿತ್ತು.

ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ ಅವರು ಅಧ್ಯಕ್ಷ ಜೋ ಬೈಡನ್ ಅವರ ನಡೆಯನ್ನು ಟೀಕಿಸಿದ್ದಾರೆ. ಅಫ್ಗಾನಿಸ್ತಾನದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಆತುರದ ನಿರ್ಧಾರದ ನಂತರ ಅಮೆರಿಕದ ಮಿತ್ರರಾಷ್ಟ್ರಗಳ ವಿಶ್ವಾಸವನ್ನು ಬೈಡನ್ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಅಮೆರಿಕದ ಮುಂದೆ ಈಗ ಹಲವು ಸವಾಲುಗಳು ಇವೆ. ಅಮೆರಿಕನ್ನರ ರಕ್ಷಣೆ ಹಾಗೂ ಸೈಬರ್ ಭದ್ರತೆ ಅತಿಮುಖ್ಯ. ಏಕೆಂದರೆ ರಷ್ಯಾದಂತಹ ದೇಶಗಳು ಹ್ಯಾಕ್ ಮಾಡುವ ಯತ್ನವನ್ನು ಮುಂದುವರಿಸುವ ಸಾಧ್ಯತೆಯಿದೆ. ನಾವು ಮತ್ತೆ ಹೋರಾಡುವ ಮನಸ್ಥಿತಿಯಲ್ಲಿಲ್ಲ ಎಂಬ ಮನೋಭಾವ ಅವರಲ್ಲಿ ಬೆಳೆಯುವ ಸಾಧ್ಯತೆಯಿದೆ ಎಂದು ಹ್ಯಾಲೆ ವಿವರಿಸಿದ್ದಾರೆ.

‘ಬೈಡನ್ ಅವರು ಮಾಡಬೇಕಾದ ಮುಖ್ಯ ಕೆಲಸವೆಂದರೆ, ನಮ್ಮ ಮಿತ್ರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಬಂಧಗಳನ್ನು ಬಲಪಡಿಸಬೇಕು. ನಮ್ಮ ಸೇನೆಯನ್ನು ಆಧುನೀಕರಣಗೊಳಸಬೇಕು. ಸೈಬರ್ ಅಪರಾಧಗಳು ಮತ್ತು ಭಯೋತ್ಪಾದಕ ಅಪರಾಧ ತಡೆಗೆ ನಾವು ಸಿದ್ಧರಾಗಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಹ್ಯಾಲೆ ಹೇಳಿದ್ದಾರೆ.

‘ನಾವು ವಿಶ್ವದಾದ್ಯಂತ ಭಯೋತ್ಪಾದನಾ ವಿರೋಧಿ ಹೋರಾಟ ಮುಂದುವರಿಸುವುದನ್ನು ಸಾರಿ ಹೇಳಬೇಕು. ಜಿಹಾದಿಗಳಿಗೆ ಈಗ ಸಿಕ್ಕಿರುವ ನೈತಿಕ ವಿಜಯವು ಅವರನ್ನು ಭಯೋತ್ಪಾದನಾ ಕೃತ್ಯ ಎಸಗಲು ಭಾರಿ ನೇಮಕಾತಿಗೆ ಪ್ರೇರೇಪಣೆ ನೀಡಬಹುದು’ ಎಂದು ಅವರು ಎಚ್ಚರಿಸಿದ್ದಾರೆ.

ಕಾಶ್ಮೀರ ವಿಮೋಚನೆ ಪ್ರಸ್ತಾಪಿಸಿದ ಅಲ್‌ಕೈದಾ
‘ಅಫ್ಗಾನಿಸ್ತಾನದವು ಅಮೆರಿಕದ ನಿಯಂತ್ರಣದಿಂದ ಹೊರಬಂದಿದೆ. ಮುಂದಿನ ಗುರಿ ಕಾಶ್ಮೀರದ ವಿಮೋಚನೆ’ – ಹೀಗೆಂದು ಅಲ್‌ಕೈದಾ ಉಗ್ರ ಸಂಘಟನೆ ಹೇಳಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ.

ತಾಲಿಬಾನ್‌ಗೆ ಬರೆದ ಶುಭಾಶಯ ಪತ್ರದಲ್ಲಿ ಕಾಶ್ಮೀರ ವಿಚಾರವನ್ನು ಅಲ್‌ಕೈದಾ ಪ್ರಸ್ತಾಪ ಮಾಡಿದೆ ಎನ್ನಲಾಗಿದೆ.ಜಿಹಾದ್‌ನ ಮುಂದಿನ ಗುರಿಗಳ ಪಟ್ಟಿಯಲ್ಲಿ ಕಾಶ್ಮೀರವನ್ನು ಸೇರಿಸಿಕೊಳ್ಳಲು ಜಾಗತಿಕ ಮುಸ್ಲಿಂ ಸಮುದಾಯಗಳಿಗೆ ಅಲ್‌ಕೈದಾ ಕರೆ ನೀಡಿದ್ದು, ಇತರೆ ಮುಸ್ಲಿಂ ಪ್ರದೇಶಗಳನ್ನು ನಿಯಂತ್ರಣಮುಕ್ತಗೊಳಿಸುವಂತೆ ಸೂಚಿಸಿದೆ.

ಕಾಶ್ಮೀರದ ಜೊತೆಗೆ, ಇರಾಕ್, ಸಿರಿಯಾ, ಜೋರ್ಡನ್ ಮತ್ತು ಲೆಬನಾನ್‌ ಅನ್ನು ಒಳಗೊಂಡ ಮೆಡಿಟರೇನಿಯನ್‌ ಸ್ವಾತ್ ಎಂದು ಕರೆಯಲಾಗುವ ಲೆವೆಂಟ್ ಪ್ರದೇಶವನ್ನು ಮುಕ್ತಗೊಳಿಸಲು ಕರೆ ನೀಡಿದೆ. ಲಿಬಿಯಾ, ಮೊರಾಕ್ಕೊ, ಅಲ್ಜೀರಿಯಾ, ಟ್ಯುನಿಷಿಯಾ ಮತ್ತು ಸೋಮಾಲಿಯಾವನ್ನು ಒಳಗೊಂಡ ಇಸ್ಲಾಮಿಕ್ ಮಾಗ್ರೇಬ್ ವಿಮೋಚನೆಯನ್ನು ಪ್ರಸ್ತಾಪಿಸಿದೆ. ಎಂದಿನಂತೆ ಯಮನ್‌ ತನ್ನ ಆದ್ಯತೆ ಎಂದು ಹೇಳಿದೆ.

ಆದರೆ ಚೀನಾದ ಕ್ಸಿನ್‌ಜಿಯಾಂಗ್‌ ಮತ್ತು ರಷ್ಯಾದ ಚೆಚೆನ್ಯಾಗಳನ್ನು ಕೈಬಿಟ್ಟಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.ಮುಸ್ಲಿಮರ ಮೇಲಿನ ದೌರ್ಜನ್ಯಗಳಿಗೆ ಈ ಎರಡೂ ಜಾಗಗಳು ಸುದ್ದಿಯಲ್ಲಿವೆ. ಆದರೆ, ತಾಲಿಬಾನ್‌ ಅನ್ನು ಚೀನಾ ಮತ್ತು ರಷ್ಯಾ ಬೆಂಬಲಿಸಿವೆ.

‘ಇಸ್ಲಾಮಿಕ್ ಪ್ರಪಂಚದ ಮೇಲೆ ಪಾಶ್ಚಿಮಾತ್ಯರಿಂದ ಹೇರಲ್ಪಟ್ಟ ನಿರಂಕುಶಾಧಿಕಾರ ಕೊನೆಗೊಳಿಸುವ ನಿಟ್ಟಿನಲ್ಲಿ ತಾಲಿಬಾನ್ ವಿಜಯ ಒಂದು ದಾರಿಯಾಗಿದೆ’ ಎಂದು ಅಲ್‌ಕೈದಾ ಅಧಿಕೃತ ಮಾಧ್ಯಮ ಸಂಸ್ಥೆಯಾದ ಅಲ್‌–ಸಹಬ್ ತಿಳಿಸಿದೆ.ಅಲ್‌ಕೈದಾ ತನ್ನ ಜಮ್ಮು ಕಾಶ್ಮೀರದ ವಿಭಾಗವಾದ ಅನ್ಸಾರ್ ಗಜ್ವಾತುಲ್ ಹಿಂದ್ ಆರಂಭಿಸುವ ವೇಳೆ ಕಾಶ್ಮೀರ ವಿಮೋಚನೆಯನ್ನು ಉಲ್ಲೇಖಿಸಿತ್ತು.

*
ಈ ಸಮಯದಲ್ಲಿ ಭಾರತ, ಜಪಾನ್, ಆಸ್ಟ್ರೇಲಿಯಾದಂತಹ ಮಿತ್ರರನ್ನು ಸಂಪರ್ಕಿಸಿ, ಅವರ ಬೆನ್ನಿಗಿದ್ದೇವೆ ಎಂದು ಬೈಡನ್ ಪ್ರಕಟಿಸಬೇಕಿದೆ.
–ನಿಕ್ಕಿ ಹ್ಯಾಲೆ, ಅಮೆರಿಕದ ಮಾಜಿ ರಾಜತಾಂತ್ರಿಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.