ADVERTISEMENT

ವೈರಾಣು: ವಿಸ್ತೃತ ಸಂಶೋಧನೆ ಇಲ್ಲದಿದ್ದರೆ ಮತ್ತೊಂದು ಸ್ಫೋಟ

ವೈರಾಣು ತಜ್ಞೆ ಶಿ ಝೆಂಗ್ಲಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 20:30 IST
Last Updated 26 ಮೇ 2020, 20:30 IST
ಶಿ ಝೆಂಗ್ಲಿ
ಶಿ ಝೆಂಗ್ಲಿ   

ಬೀಜಿಂಗ್‌: ‘ವನ್ಯಜೀವಿಗಳು ಸೇರಿದಂತೆ ಪ್ರಕೃತಿಯಲ್ಲಿರುವ ವೈರಾಣುಗಳ ಬಗ್ಗೆ ಆಳವಾದ ಸಂಶೋಧನೆ ಅಗತ್ಯ. ಈ ಕಾರ್ಯ ನಡೆಯದಿದ್ದರೆ ಜಗತ್ತು ಸೋಂಕಿನ ಮತ್ತೊಂದು ಸ್ಫೋಟವನ್ನು ಎದುರಿಸಬೇಕಾಗುತ್ತದೆ’ ಎಂದು ಚೀನಾದ ವೈರಾಣು ತಜ್ಞೆ ಶಿ ಝೆಂಗ್ಲಿ ಎಚ್ಚರಿಸಿದ್ದಾರೆ.

‘ವೈರಾಣುಗಳು ಹಾಗೂ ಅವುಗಳಿಂದ ಮಾನವನಿಗೆ ಆಗುತ್ತಿರುವ ಸಮಸ್ಯೆ ಕುರಿತು ಸತತ ಸಂಶೋಧನೆ ನಡೆಯುತ್ತಿದೆ. ಜಗತ್ತನ್ನು ಈಗ ಕಾಡುತ್ತಿರುವ ಕೊರೊನಾ ವೈರಸ್‌ ಸೋಂಕು ಇಂತಹ ಸಮಸ್ಯೆಯ ಆರಂಭವಷ್ಟೇ’ ಎಂದೂ ಅವರು ಹೇಳಿದ್ದಾರೆ.

ಝೆಂಗ್ಲಿ ಅವರುವುಹಾನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವೈರಾಲಜಿಯ ಉಪನಿರ್ದೇಶಕಿ. ಬಾವಲಿಗಳಲ್ಲಿರುವ ಕೊರೊನಾ ವೈರಾಣುಗಳ ಕುರಿತು ವ್ಯಾಪಕ ಸಂಶೋಧನೆ ನಡೆಸಿರುವ ಕಾರಣ ಅವರನ್ನು ‘ಬ್ಯಾಟ್‌ ವುಮನ್’ ಎಂದೇ ಕರೆಯಲಾಗುತ್ತದೆ. ಸರ್ಕಾರಿ ಒಡೆತನದ ಸಿಜಿಟಿಎನ್‌ ವಾಹಿನಿಗೆ ಅವರು ನೀಡಿರುವ ಸಂದರ್ಶನವನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

‘ವೈರಾಣುಗಳ ಕುರಿತ ಸಂಶೋಧನೆಗೆ ಸಂಬಂಧಿಸಿ ಸರ್ಕಾರಗಳು ಹಾಗೂ ವಿಜ್ಞಾನಿಗಳು ಪಾರದರ್ಶಕವಾಗಿ ನಡೆದುಕೊಳ್ಳಬೇಕು. ಆದರೆ, ಪ್ರಸ್ತುತ ವಿಜ್ಞಾನವನ್ನೇ ರಾಜಕೀಯಗೊಳಿಸಲಾಗಿದೆ’ ಎಂದು ಝೆಂಗ್ಲಿ ವಿಷಾದಿಸಿದ್ದಾರೆ.

‘ಬರುವ ದಿನಗಳಲ್ಲಿ ಮತ್ತೇ ಇಂಥ ಸೋಂಕಿನಿಂದ ಮಾನವ ಸಂಕುಲ ತೊಂದರೆ ಅನುಭವಿಸಬಾರದು ಎಂದಾದರೆ, ವಿಸ್ತೃತ ಸಂಶೋಧನೆ ಅಗತ್ಯ. ಅದರಲ್ಲೂ, ವನ್ಯಜೀವಿಗಳಲ್ಲಿ ಸೇರಿದಂತೆ ಪ್ರಕೃತಿಯಲ್ಲಿರುವ ವೈರಾಣುಗಳಿಂದ ಆಗಬಹುದಾದ ಸಮಸ್ಯೆ ಬಗ್ಗೆ ಬಹಳ ಮುಂಚಿತವಾಗಿಯೇ ಎಚ್ಚರಿಸುವ ಕೆಲಸವಾಗಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ನನ್ನ ಸಂಶೋಧನೆಗೆ ಆಯ್ಕೆಮಾಡಿದ್ದ ವೈರಾಣುಗಳ ಹಾಗೂ ಸದ್ಯ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಾಣುಗಳ ಗುಣಲಕ್ಷಣಗಳಲ್ಲಿ ಯಾವುದೇ ಸಾಮ್ಯತೆ ಇಲ್ಲ. ಹೀಗಾಗಿ ನಾನು ಕಾರ್ಯ ನಿರ್ವಹಿಸುವ ಪ್ರಯೋಗಾಲಯಕ್ಕೂ, ಈಗಿನ ಪಿಡುಗಿಗೂ ಯಾವುದೇ ಸಂಬಂಧ ಇಲ್ಲ‘ ಎಂದು ಅವರು ಸಾಮಾಜಿಕ ಮಾಧ್ಯಮವೊಂದರಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.