ಬೀಜಿಂಗ್: ಚೀನಾದಲ್ಲಿ ಸರ್ಕಾರ ಇಂಧನ ಬಳಕೆ ಮಿತಿಗೊಳಿಸಲು ವಿದ್ಯುತ್ ಕಡಿತದ ಕ್ರಮ ಕೈಗೊಂಡಿರುವುದರಿಂದ ಕಾರ್ಖಾನೆಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದ ಕ್ರಿಸ್‌ಮಸ್ ವೇಳೆಗೆ ಜಾಗತಿಕ ವ್ಯಾಪಾರಿಗಳು ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಸರಕುಗಳ ಕೊರತೆ ಎದುರಿಸಬೇಕಾಗಲಿದೆ. ಇಂಧನ ಬಳಕೆ ತಗ್ಗಿಸಲು ವಿದ್ಯುತ್ ಕಡಿತಕ್ಕೆ ಮಾಡುತ್ತಿರುವುದರಿಂದ ಮನೆಗಳಲ್ಲೂ ಕತ್ತಲು ಆವರಿಸುವಂತಾಗಿದೆ.
ಆ್ಯಪಲ್ ಇಂಕ್‌ನ ಐಫೋನ್‌ಗಳ ಬಿಡಿಭಾಗಗಳ ಪೂರೈಕೆದಾರರು ಸ್ಥಳೀಯ ಅಧಿಕಾರಿಗಳ ಆದೇಶದ ಮೇರೆಗೆ ಶಾಂಘೈನ ಪಶ್ಚಿಮದಲ್ಲಿರುವ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದ್ದಾರೆ.
ಈಶಾನ್ಯ ನಗರ ಲಿಯೊಯಾಂಗ್‌ನಲ್ಲಿ ವಿದ್ಯುತ್ ಕಡಿತದ ನಂತರ ಲೋಹದ ಎರಕದ ಕಾರ್ಖಾನೆಯಲ್ಲಿ ವಾತಾಯನ ಸ್ಥಗಿತಗೊಳಿಸಿದ ನಂತರ ಉಂಟಾದ ವಿಷಾನಿಲದಿಂದ 23 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಯಾವುದೇ ಸಾವು ಸಂಭವಿಸಿಲ್ಲ ಎಂದು ಸರ್ಕಾರಿ ಸ್ವಾಮ್ಯದ ಸಿಸಿಟಿವಿ ತಿಳಿಸಿದೆ.
ಚೀನಾದಾದ್ಯಂತ ಉತ್ಪಾದನಾ ಕೈಗಾರಿಕೆಗಳು ಹೆಚ್ಚು ಸಕ್ರಿಯವಾಗಿರುವ ಸಮಯದಲ್ಲೇ ವಿದ್ಯುತ್ ಕಡಿತದ ಕ್ರಮ ಅನುಸರಿಸಿರುವುದರಿಂದ ಆರ್ಥಿಕ ಬೆಳವಣಿಗೆಯ ಸಮತೋಲನ ಸಾಧಿಸಲು ಆಡಳಿತರೂಢ ಕಮ್ಯುನಿಸ್ಟ್ ಪಕ್ಷ ಹರಸಾಹಸಪಡಬೇಕಾಗಿದೆ. ಜತೆಗೆ ಮಾಲಿನ್ಯ ನಿಯಂತ್ರಿಸುವ ಮತ್ತು ಹವಾಮಾನ ಬದಲಾವಣೆಗೆ ಕಾಣವಾಗುವ ಅನಿಲಗಳ ಹೊರಸೂಸುವಿಕೆ ತಗ್ಗಿಸುವ ಸವಾಲು ಸರ್ಕಾರದ ಮೇಲಿದೆ.
‘ಇಂಧನ ಬಳಕೆ ಮಿತಿಗಳನ್ನು ಜಾರಿಗೊಳಿಸುವಲ್ಲಿ ಬೀಜಿಂಗ್‌ನ ಅಭೂತಪೂರ್ವ ನಿರ್ಧಾರವು ದೀರ್ಘಾವಧಿಯ ಪ್ರಯೋಜನಗಳಿಗೆ ಕಾರಣವಾಗಬಹುದು. ಆದರೆ, ಅಲ್ಪಾವಧಿಯ ಆರ್ಥಿಕ ವೆಚ್ಚಗಳು ಗಣನೀಯವಾಗಿರಲಿವೆ’ ಎಂದು ನೋಮುರಾ ಅರ್ಥಶಾಸ್ತ್ರಜ್ಞರಾದ ಟಿಂಗ್ ಲು, ಲಿಶೆಂಗ್ ವಾಂಗ್ ಮತ್ತು ಜಿಂಗ್ ವಾಂಗ್ ಸೋಮವಾರ ತಾವು ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.