ADVERTISEMENT

ಎನ್‌ಎಸ್‌ಎ ಅಜಿತ್ ಡೋಭಾಲ್ ಅವರನ್ನು ಭೇಟಿಯಾದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ

ಪಿಟಿಐ
Published 25 ಮಾರ್ಚ್ 2022, 8:46 IST
Last Updated 25 ಮಾರ್ಚ್ 2022, 8:46 IST
ಎನ್‌ಎಸ್‌ಎ ಅಜಿತ್ ಡೋಭಾಲ್ ಅವರನ್ನು ಭೇಟಿಯಾದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ: ಪಿಟಿಐ ಚಿತ್ರ
ಎನ್‌ಎಸ್‌ಎ ಅಜಿತ್ ಡೋಭಾಲ್ ಅವರನ್ನು ಭೇಟಿಯಾದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ: ಪಿಟಿಐ ಚಿತ್ರ   

ನವದೆಹಲಿ: ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದು, ಪೂರ್ವ ಲಡಾಖ್ ಮತ್ತು ಉಕ್ರೇನ್‌ ಬಿಕ್ಕಟ್ಟಿನ ಭೌಗೋಳಿಕ ರಾಜಕೀಯ ಪರಿಣಾಮಗಳ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಪೂರ್ವ ಲಡಾಖ್‌ನ ಮಿಲಿಟರಿ ಬಿಕ್ಕಟ್ಟಿನ ನಂತರ ಹದಗೆಟ್ಟಿರುವ ಉಭಯ ದೇಶಗಳ ಬಾಂಧವ್ಯ ಸುಧಾರಣೆ ನಿಟ್ಟಿನಲ್ಲಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ. ಢೋಬಾಲ್ ಅವರೊಂದಿಗಿನ ಮಾತುಕತೆಯ ನಂತರ ವಾಂಗ್ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನೂ ಭೇಟಿಯಾಗಿದ್ದಾರೆ.

ಉಭಯ ದೇಶಗಳ ನಡುವಿನ ಗಡಿ ಮಾತುಕತೆಗಾಗಿ ವಿಶೇಷ ಪ್ರತಿನಿಧಿಗಳಾಗಿ (ಎಸ್‌ಆರ್) ಸೇವೆ ಸಲ್ಲಿಸುತ್ತಿರುವುದರಿಂದ ವಾಂಗ್ ಮತ್ತು ಡೋಭಾಲ್ ನಡುವಿನ ಸಭೆಯಲ್ಲಿ ಪ್ರಮುಖವಾಗಿ ಗಡಿ ಸಮಸ್ಯೆಯ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಯಲಾಗಿದೆ.

ADVERTISEMENT

ಡೋಭಾಲ್ ಮತ್ತು ವಾಂಗ್, ಜುಲೈ 2020ರಲ್ಲಿ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸುವ ಮೂಲಕ ಪೂರ್ವ ಲಡಾಖ್‌ನಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನ ನಡೆಸಿದ್ದರು.

ಪೂರ್ವ ಲಡಾಖ್‌ನ ಬಿಕ್ಕಟ್ಟು ಪರಿಹಾರಕ್ಕೆ ಭಾರತ ಮತ್ತು ಚೀನಾ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳನ್ನು ನಡೆಸುತ್ತಿವೆ. ಮಾತುಕತೆಗಳ ನಂತರ, ಎರಡೂ ಕಡೆಯಿಂದ ಸೇನೆಯನ್ನು ಹಿಂತೆಗೆದುಕೊಳ್ಳಲಾಗಿದೆ.

ಮಾರ್ಚ್ 11 ರಂದು, ಪೂರ್ವ ಲಡಾಖ್ ಪ್ರದೇಶದಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಭಾರತ ಮತ್ತು ಚೀನಾ 15ನೇ ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆಯನ್ನು ನಡೆಸಿದ್ದವು. ಆದರೆ, ಈ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.