ADVERTISEMENT

ಕೊರೊನಾ ವೈರಸ್‌ ಸೋಂಕು ನಿರ್ವಹಣೆ ಲೋಪ ಬೆಳಕಿಗೆ ತಂದಿದ್ದವ ನಾಪತ್ತೆ

ಏನಾಗ್ತಿದೆ ಚೀನಾದಲ್ಲಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2020, 7:23 IST
Last Updated 10 ಫೆಬ್ರುವರಿ 2020, 7:23 IST
ವುಹಾನ್ ನಗರದ ಸಿಟಿಜನ್ ಜರ್ನಲಿಸ್ಟ್‌ ಚೆನ್ ಖಿಯುಷಿ
ವುಹಾನ್ ನಗರದ ಸಿಟಿಜನ್ ಜರ್ನಲಿಸ್ಟ್‌ ಚೆನ್ ಖಿಯುಷಿ   

ಕೊರೊನಾ ವೈರಸ್‌ ಹರಡುತ್ತಿರುವ ಕೇಂದ್ರ ಸ್ಥಾನ ಎನಿಸಿರುವ ಚೀನಾದ ವುಹಾನ್‌ ನಗರದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಕಳೆದ ಕೆಲ ವಾರಗಳಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಜಗತ್ತಿಗೆ ಮಾಹಿತಿ ನೀಡುತ್ತಿದ್ದ ಸಿಟಿಜನ್ ಜರ್ನಲಿಸ್ಟ್‌ಗಳಾದ ಚೆನ್ ಖಿಯುಷಿ ಮತ್ತು ಫಾಂಗ್‌ ಬಿನ್ ನಾಪತ್ತೆಯಾಗಿದ್ದಾರೆ.

ಈ ಆಘಾತಕಾರಿ ವಿಚಾರವನ್ನು ವಾಷಿಂಗ್‌ಟನ್‌ ಪೋಸ್ಟ್‌, ಬ್ಲೂಂಬರ್ಗ್‌, ಸಿಎನ್‌ಎನ್‌ ಸೇರಿದಂತೆ ಹಲವು ಜಾಲತಾಣಗಳು ವರದಿ ಮಾಡಿವೆ. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ವಿಚಾರದಲ್ಲಿ ಚೀನಾ ಸರ್ಕಾರ ಮಾಡುತ್ತಿರುವ ಯತ್ನಗಳನ್ನು ವಿಮರ್ಶಿಸಿದ ಬಹುತೇಕರ ಸಾಮಾಜಿಕ ಮಾಧ್ಯಮ ಖಾತೆಗಳು ಸ್ಥಗಿತಗೊಂಡಿವೆ.

ಕಳೆದ 20 ತಾಸುಗಳಿಂದ ಚೆನ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕಳೆದ ಶುಕ್ರವಾರದಿಂದ ಫೆಂಗ್ ಮೌನಕ್ಕೆ ಶರಣಾಗಿದ್ದಾರೆ. ಆಸ್ಪತ್ರೆಯೊಂದರ ಶವದ ವಿಡಿಯೊ ಚಿತ್ರೀಕರಣ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಫೆಂಗ್ ಅವರನ್ನು ಕೆಲ ಸಮಯ ಬಂಧಿಸಿದ್ದರು.

ADVERTISEMENT

ಸೋಂಕು ನಿರೋಧಕ ಉಡುಪು ಧರಿಸಿದ್ದ ಅಧಿಕಾರಿಗಳು ಮನೆಯ ಬಾಗಿಲು ಮುರಿದು, ತನ್ನನ್ನು ಬಂಧಿಸುವ ದೃಶ್ಯಗಳನ್ನು ಫೆಂಗ್ ಚಿತ್ರೀಕರಿಸಿ,ಪೋಸ್ಟ್ ಮಾಡಿದ್ದರು. ವಿಡಿಯೊಗೆ ಕಾಮೆಂಟ್ ಮಾಡಿದ್ದ ನೂರಾರು ಮಂದಿ ಫೆಂಗ್‌ ಅವರನ್ನು ಬಿಡುಗಡೆ ಮಾಡಬೇಕೆಂದು ಚೀನಾ ಸರ್ಕಾರವನ್ನು ಒತ್ತಾಯಿಸಿದ್ದರು.

ಈ ಘಟನೆಯ ನಂತರ ಎಚ್ಚೆತ್ತುಕೊಂಡ ಚೀನಾ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಗಾ ಹೆಚ್ಚಿಸಿತು. ವೆಬೊ, ವಿಚಾಟ್ ಮತ್ತು ಡೌಯಿನ್‌ ಸೇರಿದಂತೆ ಹಲವು ಜಾಲತಾಣಗಳಲ್ಲಿ ಕೆಲವರ ಚಟುವಟಿಕೆಗಳ ಮೇಲೆ ಕಣ್ಗಾವಲು ಇರಿಸಿತು. ಕೊರೊನಾ ವೈರಸ್‌ ಬಗ್ಗೆ ಮೊದಲು ಮಾಹಿತಿ ನೀಡಿದ ವೈದ್ಯರ ಸಾವಿನ ಬಗ್ಗೆ ಆಕ್ರೋಶ ವ್ಯಕ್ತಗೊಂಡ ನಂತರಕೆಲವರ ಖಾತೆಗಳನ್ನು ಸ್ಥಗಿತಗೊಳಿಸಲಾಯಿತು.

ಚೀನಾದಲ್ಲಿ ಟ್ವಿಟರ್‌ಗೆ ನಿಷೇಧವಿದೆ. ಆದರೆ ನೂರಾರು ಮಂದಿ ವಿಪಿನ್ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಮೂಲಕ ಫೈರ್‌ವಾಲ್ ನಿರ್ಬಂಧವನ್ನು ಮುರಿದು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ಮತ್ತು ವಾಸ್ತವ ವಿದ್ಯಮಾನಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ವುಹಾನ್‌ನಲ್ಲಿ ಕೊರೊನಾ ವೈರಸ್ ವ್ಯಾಪಿಸುತ್ತಿದ್ದ ವೇಳೆಯಲ್ಲಿ ನಗರದ ಮಾನವೀಯ ಮುಖಗಳನ್ನು, ನಿರ್ವಹಣೆಯಲ್ಲಿ ಸರ್ಕಾರ ಮಾಡುತ್ತಿರುವ ಎಡವಟ್ಟುಗಳನ್ನುಚೆನ್ ಸಾಮಾಜಿಕ ಮಾಧ್ಯಮಗಳ ಮೂಲಕ ಬೆಳಕಿಗೆ ತರಲು ಯತ್ನಿಸಿದರು. ಹಲವು ಪ್ರತಿಷ್ಠಿತ ಮುಖ್ಯ ಧಾರೆಯ ಮಾಧ್ಯಮಗಳೂ ಸಾಂಕ್ರಾಮಿಕ ರೋಗದ ವಿದ್ಯಮಾನದ ಮಾಹಿತಿಗಾಗಿಚೆನ್ ಅವರನ್ನುಅವಲಂಬಿಸಿದ್ದವು.

ಸಂಸ್ಕಾರವಿಲ್ಲದ ಶವಗಳು, ನಿಗಾ ಘಟಕಕ್ಕೆ ಕರೆದೊಯ್ದ ಸೋಂಕಿತರ ಸ್ಥಿತಿಗತಿ, ಸೆನ್ಸಾರ್‌ಶಿಪ್ ಜಾರಿಗಾಗಿ ಮನೆ ಬಾಗಿಲು ಬಡಿಯುತ್ತಿರುವ ಪೊಲೀಸರು ಸೇರಿದಂತೆ ಹಲವು ದೃಶ್ಯಗಳನ್ನು ಇದೀಗ ವುಹಾನ್ ನಾಗರಿಕರು ವಿಡಿಯೊ ಮಾಡಿ ಹಂಚಿಕೊಳ್ಳುತ್ತಿದ್ದಾರೆ.

ವಿಚಾಟ್‌ನಲ್ಲಿ ಕೊರೊನಾ ವೈರಸ್‌ ಬಗ್ಗೆ ಚರ್ಚೆ ಮಾಡಿದ ಹಲವರ ಖಾತೆಗಳನ್ನು ಚೀನಾ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ವಿಚಾಟ್‌ನಲ್ಲಿ ಸೇವ್ ಮಾಡಿಕೊಂಡಿದ್ದ ಚಿತ್ರಗಳು ಮತ್ತು ವಿಚಾಟ್ ವ್ಯಾಲೆಟ್‌ನಲ್ಲಿದ್ದ ಹಣವನ್ನೂ ಜನರು ಕಳೆದುಕೊಳ್ಳುವಂತಾಯಿತು. ಈ ಘಟನೆಯ ನಂತರ ಹಲವರು ನೈತಿಕ ಪೊಲೀಸ್‌ಗಿರಿ ಆರಂಭಿಸಿ, ಕೊರೊನಾ ಬಗ್ಗೆ ಯಾರೊಂದಿಗೂ ಚರ್ಚಿಸಬಾರದೆಂದು ತಾಕೀತು ಮಾಡಲು ಆರಂಭಿಸಿದರು.

‘ಕಳೆದ ಗುರುವಾರ ಸಂಜೆ 7 ಗಂಟೆಯಿಂದಲೂ ಚೆನ್ ನಾಪತ್ತೆಯಾಗಿದ್ದಾರೆ’ ಎಂದು ಗೆಳೆಯರು ಚೆನ್ ಟ್ವಿಟರ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಚೀನಾದಲ್ಲಿ ನಿಜವಾಗಿ ಏನಾಗುತ್ತಿದೆಎಂದು ವರದಿ ಮಾಡುತ್ತಿರುವ ಕೆಲವೇ ಜನರ ಪೈಕಿ ನೀವೂ ಒಬ್ಬರು. ನಿಮ್ಮ ಸುರಕ್ಷೆಯ ಬಗ್ಗೆ ಆತಂಕವಾಗುತ್ತಿಲ್ಲವೇ’ ಎಂದು ಬ್ಲೂಂಬರ್ಗ್‌ ಜಾಲತಾಣದ ವರದಿಗಾರರು ಟೆಕ್ಸ್ಟ್‌ ಮಾಡಿದ್ದಪ್ರಶ್ನೆಗೆ ಉತ್ತರ ಹೇಳಲು ಚೆನ್ ಈವರೆಗೆ ಸಿಕ್ಕಿಲ್ಲ.

(ಯುಟ್ಯೂಬ್‌ನಲ್ಲಿ ಚೆನ್ ಹಂಚಿಕೊಂಡಿದ್ದ ವಿಡಿಯೊ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.