ADVERTISEMENT

ವಿದ್ಯುತ್ ಜಾಲಕ್ಕೆ ಚೀನಾ ಕನ್ನ: ಅಮೆರಿಕ ಸಂಸ್ಥೆಯ ವರದಿ

ಭಾರತದ ವಿವಿಧ ಸಂಸ್ಥೆಗಳ ಕಂಪ್ಯೂಟರ್‌ಗಳಿಗೆ ಕುತಂತ್ರಾಂಶ

ಪಿಟಿಐ
Published 1 ಮಾರ್ಚ್ 2021, 20:38 IST
Last Updated 1 ಮಾರ್ಚ್ 2021, 20:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಗಡಿ ಬಿಕ್ಕಟ್ಟು ತೀವ್ರಗೊಂಡಿದ್ದ ಸಂದರ್ಭದಲ್ಲಿ ಚೀನಾವು ಭಾರತದ ವಿದ್ಯುತ್‌ ಗ್ರಿಡ್‌ಗ
ಳನ್ನು ಹಾಳುಗೆಡವುವ ಸಂಚು ರೂಪಿಸಿತ್ತು ಎಂದು ಅಮೆರಿಕದ ರೆಕಾರ್ಡೆಡ್‌ ಫ್ಯೂಚರ್‌ ಎಂಬ ಕಂಪೆನಿಯ ಅಧ್ಯಯನ ವರದಿಯು ಹೇಳಿದೆ.

ಚೀನಾ ಸರ್ಕಾರ ಪ್ರಾಯೋಜಿತ ರೆಡ್‌ಇಕೊ ಎಂಬ ಹ್ಯಾಕರ್‌ಗಳಗುಂಪು, ಅತ್ಯಂತ ನಿರ್ಣಾಯಕವಾದ ವಿದ್ಯುತ್‌ ಗ್ರಿಡ್‌ನ ಕಂಪ್ಯೂಟರ್ ವ್ಯವಸ್ಥೆಗೆ ಕುತಂತ್ರಾಂಶಗಳನ್ನು ನುಗ್ಗಿಸಿತ್ತು.ಕಂಪ್ಯೂಟರ್‌ ಜಾಲದ ಚಟುವಟಿಕೆಗಳ ಸ್ವಯಂಚಾಲಿತ ವಿಶ್ಲೇಷಣೆ ಮತ್ತು ಪರಿಣತರ ವಿಶ್ಲೇಷಣೆಯ ಮೂಲಕ ಈ ಅಂಶವನ್ನು ಗುರುತಿಸಲಾಗಿದೆ ಎಂದು ರೆಕಾರ್ಡೆಡ್‌ ಫ್ಯೂಚರ್‌ ಹೇಳಿದೆ.

ಕಳೆದ ಅಕ್ಟೋಬರ್‌ 12ರಂದು ಮುಂಬೈಯಲ್ಲಿ ಗ್ರಿಡ್‌ ವೈಫಲ್ಯವಾಗಿ ಹಲವು ತಾಸು ವಿದ್ಯುತ್‌ಇರಲಿಲ್ಲ. ಇದರಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು, ಕೋವಿಡ್‌ನಿಂದಾಗಿ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ತೊಂದರೆ ಆಗಿತ್ತು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿದ್ದಿತ್ತು.ಗ್ರಿಡ್‌ ಸರಿಪಡಿಸಲು ಎರಡು ತಾಸು ಬೇಕಾಗಿತ್ತು.ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಈ ವೈಫಲ್ಯದ ಬಗ್ಗೆ ತನಿಖೆಗೂ ಆದೇಶಿಸಿದ್ದರು.

ADVERTISEMENT

ಈ ಗ್ರಿಡ್‌ ವೈಫಲ್ಯಕ್ಕೆ ಚೀನಾದ ಹ್ಯಾಕರ್‌ಗಳು ಕಾರಣ ಆಗಿರಬಹುದೇ ಎಂಬ ಅನುಮಾನ ಈಗ ಮೂಡಿದೆ.

ಗಡಿಗೆ ಸಂಬಂಧಿಸಿ ಭಾರತವು ತನ್ನ ನಿಲುವನ್ನು ಇನ್ನಷ್ಟು ಬಿಗಿಗೊಳಿಸಿದರೆ ಏನಾಗಬಹುದು ಎಂಬುದನ್ನು ತೋರಿಸುವುದಕ್ಕಾಗಿಯೇ ಮುಂಬೈ ಗ್ರಿಡ್‌ ವಿಫಲವಾಗುವಂತೆ ಮಾಡಲಾಗಿದೆಯೇ ಎಂದು ನ್ಯೂಯಾರ್ಕ್‌ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಪ್ರಶ್ನಿಸಲಾಗಿದೆ.

ಆಗಿರಬಹುದಾದ ಹಾನಿಯನ್ನು ಗುರುತಿಸಿ ಸರಿಪಡಿಸಲು ಮತ್ತು ಅಗತ್ಯ ತನಿಖೆ ಕೈಗೊಳ್ಳಲು ಸಾಧ್ಯವಾಗುವಂತೆ ವರದಿ ಪ್ರಕಟಿಸುವುದಕ್ಕೆ ಮುನ್ನವೇ ಭಾರತ ಸರ್ಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ರೆಕಾರ್ಡೆಡ್‌ ಫ್ಯೂಚರ್‌ ಸಂಸ್ಥೆಯು ಹೇಳಿದೆ. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭಾರತದ ಸಂಸ್ಥೆಗಳ ಜಾಲದಲ್ಲಿ ರೆಡ್‌ಇಕೊ ಗುಂಪಿನ ಚಟುವಟಿಕೆ 2020ರ ಆರಂಭದಲ್ಲಿಯೇ ಕಂಡು ಬಂದಿತ್ತು. ಈ ಚಟುವಟಿಕೆಯು ತೀವ್ರಗೊಂಡ ಕಾರಣಕ್ಕೆ ರೆಕಾರ್ಡೆಡ್‌ ಫ್ಯೂಚರ್‌ ಸಂಸ್ಥೆಯ ಇನ್‌ಸಿಕ್ಟ್‌ ಗ್ರೂಪ್‌ ಎಂಬ ವಿಭಾಗವು ನಿಗಾ ಇರಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಕಂಪ್ಯೂಟರ್‌ ಜಾಲದಲ್ಲಿ ಕುತಂತ್ರಾಂಶವನ್ನು ಕೂರಿಸಿದರೆ, ಅದು ಚೀನಾದ ಕಾರ್ಯತಂತ್ರಗಳಿಗೆ ಪೂರಕವಾಗಿ ಕೆಲಸ ಮಾಡಬಹುದು. ಗಡಿ ಬಿಕ್ಕಟ್ಟು ತೀವ್ರಗೊಂಡಾಗ ಸೇನೆಯ ಸಿಗ್ನಲ್‌ ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

2020ರ ಆರಂಭದಲ್ಲಿಯೇ ಕುತಂತ್ರಾಂಶಗಳನ್ನು ನುಗ್ಗಿಸುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ, ಲಡಾಖ್‌ನಲ್ಲಿ ಗಡಿ ಬಿಕ್ಕಟ್ಟು ಉಲ್ಬಣಗೊಂಡು ಗಾಲ್ವನ್‌ ಕಣಿವೆಯಲ್ಲಿ ಸಂಘರ್ಷ ನಡೆದ ಬಳಿಕ ಕುತಂತ್ರಾಂಶ ನುಗ್ಗಿಸುವಿಕೆ ಇನ್ನಷ್ಟು ವೇಗ ಪಡೆಯಿತು ಎಂದು ರೆಕಾರ್ಡೆಡ್‌ ಫ್ಯೂಚರ್‌ ಹೇಳಿದೆ.

ಭಾರತ ಸರ್ಕಾರ ಪ್ರಾಯೋಜಿತ ಸೈಡ್‌ವೈಂಡರ್‌ ಎಂಬ ಗುಂಪು ಚೀನಾದ ಸೇನೆ ಮತ್ತು ಸರ್ಕಾರಿ ಸಂಸ್ಥೆಗಳ ಕಂಪ್ಯೂಟರ್‌ ಜಾಲದಲ್ಲಿ ಚಟುವಟಿಕೆ ನಡೆಸಿತ್ತು ಎಂದೂ ರೆಕಾರ್ಡೆಡ್‌ ಫ್ಯೂಚರ್‌ ಆರೋಪ ಮಾಡಿದೆ.

ಭಾರತ–ಚೀನಾ ನಡುವೆ ಪೂರ್ವ ಲಡಾಖ್‌ನಲ್ಲಿ ಸುಮಾರು ಎಂಟು ತಿಂಗಳು ಸೇನಾ ಮುಖಾಮುಖಿ ನಡೆದಿತ್ತು. ಪ್ಯಾಂಗಾಂಗ್‌ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಬೀಡುಬಿಟ್ಟಿದ್ದ ಸೈನಿಕರು ಮತ್ತು ಯುದ್ಧೋಪಕರಣಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿ ಎರಡೂ ದೇಶಗಳು ಕಳೆದ ತಿಂಗಳು ಸಹಮತಕ್ಕೆ ಬಂದಿವೆ. ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯೂ ಈಗ ಪೂರ್ಣಗೊಂಡಿದೆ.

ದುರುದ್ದೇಶದ ಆಪಾದನೆ: ಚೀನಾ

ಈ ಆರೋಪವನ್ನು ಚೀನಾ ಅಲ್ಲಗಳೆದಿದೆ. ‘ಯಾವುದೇ ಆಧಾರ ಇಲ್ಲದ ಆರೋಪ ಇದು. ಬೇಜವಾಬ್ದಾರಿಯಿಂದ ಕೂಡಿದ ದುರುದ್ದೇಶದ ಆಪಾದನೆ’ ಎಂದು ಚಿನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌ ಹೇಳಿದ್ದಾರೆ. ‘ಚೀನಾವು ಸೈಬರ್‌ ಸುರಕ್ಷತೆಯ ಪ್ರಬಲ ಪ್ರತಿಪಾದಕ. ಯಾವುದೇ ರೀತಿಯ ಸೈಬರ್‌ ದಾಳಿಯನ್ನು ನಾವು ವಿರೋಧಿಸುತ್ತೇವೆ. ಸೈಬರ್‌ ದಾಳಿಯ ಮೂಲವನ್ನು ಪತ್ತೆ ಮಾಡುವುದು ಕಷ್ಟ. ಯಾವುದೇ ಆಧಾರ ಇಲ್ಲದೆ ಊಹೆ ಮಾಡಿ ಒಂದು ದೇಶದ ಮೇಲೆ ಆರೋಪ ಹೊರಿಸಬಾರದು. ಇಂತಹ ವರ್ತನೆಯನ್ನು ಚೀನಾ ಖಂಡಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಒಳನುಸುಳಿದ ಪ್ಲಗ್‌ಎಕ್ಸ್‌?

2020ರ ಮೇ ತಿಂಗಳ ಹೊತ್ತಿಗೆ ಭಾರತದ ಸಂಸ್ಥೆಗಳ ಕಂಪ್ಯೂಟರ್‌ ಜಾಲದಲ್ಲಿ ಪ್ಲಗ್‌ ಎಕ್ಸ್‌ ಎಂಬ ಕುತಂತ್ರಾಂಶದ ಚಟುವಟಿಕೆ ಗಮನಾರ್ಹ ಮಟ್ಟದಲ್ಲಿ ಏರಿಕೆಯಾಗಿತ್ತು. ಭಾರತದ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ರಕ್ಷಣಾ ಸಂಸ್ಥೆಗಳಲ್ಲಿಯೂ ಪ್ಲಗ್‌ ಎಕ್ಸ್‌ ಕಾಣಿಸಿಕೊಂಡಿದೆ. ಚೀನಾದ ಸೈಬರ್‌ ಗೂಢಚರ್ಯೆಯಲ್ಲಿ ಪ್ಲಗ್‌ ಎಕ್ಸ್‌ ಪ್ರಮುಖ ಪಾತ್ರ ವಹಿಸುತ್ತಿದೆ. ಹಲವು ವರ್ಷಗಳಿಂದ ಚೀನಾವು ಈ ಕುತಂತ್ರಾಂಶವನ್ನು ಬಳಸುತ್ತಿದೆ ಎಂದು ವರದಿಯು ವಿವರಿಸಿದೆ.

ಏನೇನು ಗುರಿ?

* ವಿದ್ಯುತ್ ಕ್ಷೇತ್ರದ ಹತ್ತು ಸಂಘಟನೆಗಳು. ವಿದ್ಯುತ್‌ ಪೂರೈಕೆ ಮತ್ತು ಬೇಡಿಕೆಯನ್ನು ಸಮತೋಲನಗೊಳಿಸುವ ಗ್ರಿಡ್‌ ಅನ್ನು ನಿಭಾಯಿಸುವ ಪ್ರಾದೇಶಿಕವಾದ ನಾಲ್ಕು ಲೋಡ್‌ ಹಂಚಿಕೆ ಕೇಂದ್ರಗಳು ಇದರಲ್ಲಿ ಸೇರಿವೆ. ದೇಶದಲ್ಲಿ ಒಟ್ಟು ಐದು ಪ್ರಾದೇಶಿಕ ಲೋಡ್‌ ಹಂಚಿಕೆ ಕೇಂದ್ರಗಳಿವೆ

* ಎರಡು ಬಂದರುಗಳು

* ಚೀನಾ ಸರ್ಕಾರ ಪ್ರಾಯೋಜಿತ ಹ್ಯಾಕರ್‌ ಗುಂಪುಗಳು ಭಾರತದ ಖಾಸಗಿ ವಲಯದ ಸಂಸ್ಥೆಗಳನ್ನೂ ಗುರಿ ಮಾಡಿಕೊಂಡಿವೆ

‘ಸೈಬರ್‌ ದಾಳಿಯಿಂದ ಏನೂ ಆಗಿಲ್ಲ’

ಈ ಕುತಂತ್ರಾಂಶ ದಾಳಿಯಿಂದಾಗಿ ಯಾವುದೇ ಸಮಸ್ಯೆ ಆಗಿಲ್ಲ. ಯಾವುದೇ ದತ್ತಾಂಶ ಕಳವಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿದ್ಯುತ್‌ ಗ್ರಿಡ್‌ ಮೇಲೆ ಸೈಬರ್‌ ದಾಳಿಯ ಯತ್ನ ನಡೆದಿದ್ದು ಹೌದು. ಶ್ಯಾಡೊ ಪ್ಯಾಡ್‌ ಎಂಬ ಕುತಂತ್ರಾಂಶದಿಂದ ಕಂಪ್ಯೂಟರ್‌ ಜಾಲಕ್ಕೆ ಬೆದರಿಕೆ ಇದೆ ಎಂಬ ಸಂದೇಶ ಸಿಇಆರ್‌ಟಿ–ಇನ್‌ನಿಂದ (ಭಾರತದ ಕಂಪ್ಯೂಟರ್‌ ತುರ್ತು ಸ್ಪಂದನಾ ತಂಡ) 2020ರ ನವೆಂಬರ್‌ 19ರಂದು ಬಂದಿತ್ತು. ಈ ಬೆದರಿಕೆಯನ್ನು ನಿವಾರಿಸಲು ಬೇಕಾದ ಕ್ರಮವನ್ನು ಅಂದೇ ಕೈಗೊಳ್ಳಲಾಗಿದೆ ಎಂದು ವಿದ್ಯುತ್‌ ಸಚಿವಾಲಯ ತಿಳಿಸಿದೆ.

ಕಳೆದ ಅಕ್ಟೋಬರ್‌ 2ರಂದು ಮುಂಬೈಯಲ್ಲಿ ಆಗಿದ್ದ ಗ್ರಿಡ್‌ ವೈಫಲ್ಯದ ಬಗ್ಗೆ ಸಚಿವಾಲಯ ಏನನ್ನೂ ಹೇಳಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.