ADVERTISEMENT

ಪಾಕಿಸ್ತಾನ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಚೀನಾದ ನಾಗರಿಕನ ಬಂಧನ

ಪಿಟಿಐ
Published 16 ಸೆಪ್ಟೆಂಬರ್ 2022, 9:36 IST
Last Updated 16 ಸೆಪ್ಟೆಂಬರ್ 2022, 9:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಅಪ್ರಾಪ್ತ ಬಾಲಕಿ ಮೇಲೆ ಕಳೆದ ಒಂದು ತಿಂಗಳಿನಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪದಡಿ ಚೀನಾದ ನಾಗರಿಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೀನಾದ ನಾಗರಿಕರೊಂದಿಗೆ ಭಾಷಾಂತರ ಕೆಲಸ ನಿರ್ವಹಿಸುತ್ತಿದ್ದ 16 ವರ್ಷದ ಬಾಲಕಿ ನೀಡಿರುವ ದೂರಿನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಶುಕ್ರವಾರ 'ಡಾನ್‌' ವರದಿ ಮಾಡಿದೆ.

ಭಾಷಾಂತರ ಕೆಲಸಕ್ಕೆ ಸೇರಿದ ಆರಂಭದಿಂದಲೇ ಆರೋಪಿಯು ದೌರ್ಜನ್ಯ ಎಸಗಲು ಆರಂಭಿಸಿದ್ದಾಗಿ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಜನವರಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಬೆದರಿಕೆ ಒಡ್ಡಿ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಎಂದಿದ್ದಾಳೆ.

ADVERTISEMENT

ಬಾಲಕಿ ಗರ್ಭಿಣಿಯಾಗಿದ್ದಳು, ಆದರೆ ಮನೆಯವರಿಗೆ ತಿಳಿಸಿರಲಿಲ್ಲ. ಆಕೆಯ ಸಹೋದರಿ ಗಮನಿಸಿ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ 31 ವಾರಗಳ ಗರ್ಭಿಣಿ ಎಂಬ ವಿಚಾರ ಬಹಿರಂಗವಾಗಿದೆ. ನಂತರ ಪೊಲೀಸರಿಗೆ ದೂರು ನೀಡಲಾಗಿದೆ.

ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಆತನ ಪಾಸ್‌ಪೋರ್ಟ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಬಾಲಕಿ ಜೊತೆ ದೈಹಿಕ ಸಂಪರ್ಕ ಹೊಂದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆದರೆ ಅತ್ಯಾಚಾರ ಎಸಗಿರುವುದನ್ನು ನಿರಾಕರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.