ADVERTISEMENT

ಹವಾಮಾನ ಬದಲಾವಣೆ ಸಂಬಂಧಿಸಿದ ​ಮಾತುಕತೆ; ಭಾರತದತ್ತ ಜಾನ್ ಕೆರ‍್ರಿ

ಏ23ರ ಶೃಂಗಸಭೆಗೆ ತಯಾರಿ

ಪಿಟಿಐ
Published 1 ಏಪ್ರಿಲ್ 2021, 6:43 IST
Last Updated 1 ಏಪ್ರಿಲ್ 2021, 6:43 IST
ಜಾನ್ ಕೆರ‍್ರಿ
ಜಾನ್ ಕೆರ‍್ರಿ   

ವಾಷಿಂಗ್ಟನ್‌: ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್‌ ಕೆರ‍್ರಿ ಅವರು ಏಷ್ಯಾ ಪ್ರವಾಸ ಆರಂಭಿಸಿದ್ದು, ಏಪ್ರಿಲ್‌ 9ರವರೆಗೆ ಯುಎಇ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಪ್ರಕಟಣೆ ತಿಳಿಸಿದೆ.

ಏಪ್ರಿಲ್ 22 ರಿಂದ 23ರವರೆಗೆ ಅಧ್ಯಕ್ಷ ಜೋ ಬೈಡನ್ ನೇತೃತ್ವದಲ್ಲಿ ನಡೆಯಲಿರುವ ಹವಾಮಾನ ಕುರಿತ ಶೃಂಗಸಭೆ ಮತ್ತು ನವೆಂಬರ್‌ನಲ್ಲಿ ಗ್ಲಾಸ್ಗೋದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶಗಳಿಗೆ (ಕಾಪ್‌26) ಮೊದಲಾಗಿ ಹವಾಮಾನ ಬದಲಾವಣೆ ಕುರಿತಂತೆ ಇನ್ನಷ್ಟು ಬದ್ಧತೆ ಪ್ರದರ್ಶಿಸುವ ಸಲುವಾಗಿ ಜಾನ್‌ ಕೆರ್ರಿ ಅವರು ಈ ಪ್ರವಾಸ ಕೈಗೊಂಡಿದ್ದಾರೆ.

‘ಹವಾಮಾನ ಬಿಕ್ಕಟ್ಟನ್ನು ಹೇಗೆ ನಿಭಾಯಿಸುವುದು‘ ಎಂಬುದರ ಕುರಿತು ಅರಬ್‌ ಒಕ್ಕೂಟ, ಭಾರತ ಮತ್ತು ಬಾಂಗ್ಲಾದೇಶ ಸರ್ಕಾರದೊಂದಿಗೆ ಅರ್ಥಪೂರ್ಣ ಚರ್ಚೆ ನಡೆಸಲು ಉತ್ಸುಕನಾಗಿದ್ದೇನೆ‘ ಎಂದು ಎಂದು ಜಾನ್‌ ಕೆರ‍್ರಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಪ್ರಧಾನಿಗೂ ಆಹ್ವಾನ: ಏಪ್ರಿಲ್‌ 22–23ರಂದು ವರ್ಚುವಲ್‌ ರೂಪದಲ್ಲಿ ನಡೆಯಲಿರುವ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಮತ್ತು ಭೂತಾನ್‌ನ ಪ್ರಧಾನಿ ಲೊಟೆ ತ್ಸೇರಿಂಗ್ ಅವರಿಗೆ ಆಹ್ವಾನ ನೀಡಲಾಗಿದೆ. ದಕ್ಷಿಣ ಏಷ್ಯಾದ ಈ ಮೂವರು ನಾಯಕರ ಜತೆಗೆ ಚೀನಾ, ರಷ್ಯಾ, ಬ್ರೆಜಿಲ್‌, ಜಪಾನ್‌, ಇಸ್ರೇಲ್‌, ಸೌದಿ ಅರೇಬಿಯಾ, ಬ್ರಿಟನ್‌, ಕೆನಡಾ ದೇಶಗಳ ಅಧ್ಯಕ್ಷರು/ ಪ್ರಧಾನಿಗಳು ಸಹ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.