ADVERTISEMENT

ರಷ್ಯಾ: ಕಲ್ಲಿದ್ದಲು ಗಣಿಯಲ್ಲಿ ಬೆಂಕಿ ಅವಘಡ; 11 ಸಾವು, 40 ಜನರಿಗೆ ಗಾಯ

ಏಜೆನ್ಸೀಸ್
Published 25 ನವೆಂಬರ್ 2021, 11:52 IST
Last Updated 25 ನವೆಂಬರ್ 2021, 11:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಸ್ಕೊ: ರಷ್ಯಾದ ಸೈಬೆರಿಯಾದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 11 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಗಣಿಯಲ್ಲಿ 12ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ.

ಸೈಬೆರಿಯಾದ ಕೆಮೆರೊವೊ ವಲಯದಲ್ಲಿನ ಗಣಿಯಲ್ಲಿ ಅವಘಡ ಸಂಭವಿಸಿದೆ. ಕಲ್ಲಿದ್ದಲು ದೂಳಿಗೆ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆ ವ್ಯಾಪಿಸಿದೆ ಎಂದು ಸರ್ಕಾರಿ ಮಾಧ್ಯಮ ಟಾಸ್‌ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ.

ಅವಘಡ ಸಂಭವಿಸಿದಾಗ ಸುಮಾರು 285 ಮಂದಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಲ್ಲಿ 239 ಜನರನ್ನು ರಕ್ಷಿಸಲಾಗಿದೆ. ಹಲವರು ಸಿಲುಕಿದ್ದಾರೆ. 43 ಜನರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.

ADVERTISEMENT

ರಷ್ಯಾ ವಿಕೋಪ ತುರ್ತುಸ್ಥಿತಿಯ ಪ್ರಭಾರ ಸಚಿವ ಅಲೆಕ್ಸಾಂಡರ್‌ ಚುಪ್ರಿಯನ್, ‘ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ದಟ್ಟ ಹೊಗೆಯಿಂದಾಗಿ ವಿಳಂಬವಾಗಿದೆ. ಸುರಕ್ಷತಾ ಕ್ರಮ ಪಾಲಿಸಿರಲಿಲ್ಲ. ನಿಯಮ ಉಲ್ಲಂಘನೆ ಎಂಬ ಬಗ್ಗೆ ತನಿಖೆ ಆರಂಭವಾಗಿದೆ’ ಎಂದರು.

‘ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಅವರು, ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ’ ಎಂದು ಅವರ ವಕ್ತಾರ ಮಿಟ್ರಿ ಪೆಸ್ಕೊ ತಿಳಿಸಿದರು.

2016ರಲ್ಲಿ ನಡೆದಿದ್ದ ಅವಘಡದಲ್ಲಿ 36 ಜನ ಸತ್ತಿದ್ದರು. ಆಗ ದೇಶದ ಗಣಿಗಳಲ್ಲಿನ ಸುರಕ್ಷತೆ ಕ್ರಮಗಳ ಬಗ್ಗೆ ಸಮೀಕ್ಷೆ ನಡೆಸಿದ್ದ ಸರ್ಕಾರ, 20 ಗಣಿಗಳು ಅಸುರಕ್ಷಿತವಾಗಿವೆ ಎಂದು ಘೋಷಿಸಿತ್ತು. ಈಗ ಅವಘಡ ಸಂಭವಿಸಿರುವ ಗಣಿ ಆ ಪಟ್ಟಿಯಲ್ಲಿ ಸೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.