ಬೊಗೋಟಾ(ಕೊಲಂಬಿಯಾ): ಇಲ್ಲಿ ನಡೆದ ಚುನಾವಣಾ ರ್‍ಯಾಲಿಯ ವೇಳೆ ಡೆಮಾಕ್ರೆಟಿಕ್ ಸೆಂಟರ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ, ಸೆನೆಟರ್ ಮಿಗುಯೆಲ್ ಉರಿಬೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಉರಿಬೆ ಅವರು ನೂರಾರು ಜನರುದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಸಿದ್ದು, ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ಉರಿಬೆ ಅವರ ಪರಿಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಟಾರ್ನಿ ಜನರಲ್ ಲುಜ್ ಆಡ್ರಿಯಾನಾ ಕ್ಯಾಮಾರ್ಗೊ ಕ್ಯಾರಕೋಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉರಿಬೆ ಅವರ ಕುತ್ತಿಗೆ ಅಥವಾ ತಲೆಗೆ ಕನಿಷ್ಠ ಒಂದು ಗುಂಡು ತಗುಲಿರುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತಮ್ಮ ಪ್ರತಿಸ್ಪರ್ಧಿಯ ಮೇಲಿನ ಗುಂಡಿನ ದಾಳಿಯನ್ನು ಖಂಡಿಸಿರುವ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ, ಈ ಹಿಂಸಾಚಾರದ ಕೃತ್ಯವು ಒಬ್ಬ ವ್ಯಕ್ತಿಯ ವಿರುದ್ಧ ಮಾತ್ರವಲ್ಲ, ಪ್ರಜಾಪ್ರಭುತ್ವ ವಿರುದ್ಧವೂ ಆಗಿದೆ’ ಎಂದು ಕಿಡಿಕಾರಿದ್ದಾರೆ.
ಪ್ರಕರಣ ಸಂಬಂಧ 15 ವರ್ಷದ ಬಾಲಕನನ್ನು ಬಂಧಿಸಲಾಗಿದ್ದು, ಆತನೇ ಗುಂಡಿನ ದಾಳಿ ನಡೆಸಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಮುಂದಿನ ವರ್ಷ ಮೇ ತಿಂಗಳಿನಲ್ಲಿ ಕೊಲಂಬಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.