ADVERTISEMENT

Covid-19 World update: ಬ್ರೆಜಿಲ್‌ನಲ್ಲಿ ಒಂದೇ ದಿನ 1,005 ಮಂದಿ ಸಾವು

ಏಜೆನ್ಸೀಸ್
Published 6 ಜೂನ್ 2020, 2:38 IST
Last Updated 6 ಜೂನ್ 2020, 2:38 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಾಂದರ್ಭಿಕ ಚಿತ್ರ
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಾಂದರ್ಭಿಕ ಚಿತ್ರ   

ರಿಯೊ ಡಿ ಜನೈರೊ: ಲ್ಯಾಟಿನ್‌ ಅಮೆರಿಕದ ಬ್ರೆಜಿಲ್‌ನಲ್ಲಿ ಕೊರೊನಾ ವೈರಸ್‌ ಸೋಂಕು ವ್ಯಾಪಿಸುತ್ತಿದ್ದು, ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್‌–19ನಿಂದ 1,005 ಮಂದಿ ಮೃತಪಟ್ಟಿರುವುದಾಗಿ ಬ್ರೆಜಿಲ್‌ ಆರೋಗ್ಯ ಸಚಿವಾಲಯ ಹೇಳಿದೆ.

ಬ್ರೆಜಿಲ್‌ನಲ್ಲಿ ಒಟ್ಟು 34,000ಕ್ಕಿಂತ ಹೆಚ್ಚು ಮಂದಿ ಕೋವಿಡ್‌–19ನಿಂದಾಗಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದಿಕ್ಕಿದೆ. ಜಾಗತಿಕವಾಗಿ ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟವರು 4,00,000 ಸಮೀಪಿಸಿದೆ. ಸಾವಿನ ಲೆಕ್ಕಾಚಾರದಲ್ಲಿ ಬ್ರೆಜಿಲ್‌ ಈಗ ಮೂರನೇ ಸ್ಥಾನದಲ್ಲಿದೆ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಮೃತಪಟ್ಟವರ ಸಂಖ್ಯೆ 40,000 ದಾಟಿದೆ. ಅಮೆರಿಕದಲ್ಲಿ 1,10,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

6,46,006 ಪ್ರಕರಣಗಳಿರುವ ಬ್ರೆಜಿಲ್‌ನೊಂದಿಗೆ ಮೆಕ್ಸಿಕೊ, ಪೆರು, ಈಕ್ವಡಾರ್‌ ಹಾಗೂ ಚಿಲಿಯಲ್ಲಿ ಸಾವಿನ ಸಂಖ್ಯೆ ಏರು ಗತಿಯಲ್ಲಿದೆ. ಮೆಕ್ಸಿಕೊದಲ್ಲಿ ಒಂದೇ ದಿನ 4,442 ಸೋಂಕು ಪ್ರಕರಣಗಳು ದಾಖಲಾಗಿವೆ. ಪೆರುವಿನಲ್ಲಿ ಆಕ್ಸಿಜನ್‌ ಟ್ಯಾಂಕ್‌ ಖರೀದಿಸಲು ಜನರು ಸಾಲುಗಟ್ಟಿದ್ದಾರೆ.

ADVERTISEMENT

ವರ್ಡೋಮೀಟರ್‌ ಪ್ರಕಾರ, ಜಾಗತಿಕವಾಗಿ ದಾಖಲಾಗಿರುವ ಒಟ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳು 68,44,705. ಸೋಂಕಿನಿಂದ 3,98,141 ಮಂದಿ ಸಾವಿಗೀಡಾಗಿದ್ದು, 33,48,831 ಜನ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಅತಿ ಹೆಚ್ಚು 19,65,708 ಸೋಂಕು ಪ್ರಕರಣಗಳು, ರಷ್ಯಾದಲ್ಲಿ 4,49,834 ಪ್ರಕರಣಗಳು ಹಾಗೂ ಸೋಂಕಿನಿಂದ 5,528 ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ 2,26,770 ಪ್ರಕರಣಗಳಿದ್ದು, 6,348 ಮಂದಿ ಸಾವಿಗೀಡಾಗಿದ್ದಾರೆ. ಈ ನಡುವೆ ಯುರೋಪ್‌ನಲ್ಲಿ ಯಾವುದೇ ರಾಷ್ಟ್ರಗಳಿಗೆ ಸಂಚಾರ ಮಾಡಲು ಜರ್ಮನಿ ಅವಕಾಶ ನೀಡಿದೆ. ಏಷ್ಯಾ ಮತ್ತು ಯುರೋಪ್‌ನಲ್ಲಿ ವಾಣಿಜ್ಯ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ಭಾರತ ಮತ್ತು ಚೀನಾದಲ್ಲಿ ದೇಶದೊಳಗೆ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಿನಿಮಾ ನಿರ್ಮಾಣ ಹಾಗೂ ಲೈವ್‌ ಸ್ಪೋರ್ಟ್ಸ್ ಜೂನ್‌ 12ರಿಂದ ಶುರುಮಾಡುವ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.