ADVERTISEMENT

ಚೀನಾದಲ್ಲಿ ಕೊರೊನಾ ವೈರಸ್‌‌ನಿಂದಾಗಿ ಸಾವಿಗೀಡಾದವರ ಸಂಖ್ಯೆ 1,765ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 4:29 IST
Last Updated 17 ಫೆಬ್ರುವರಿ 2020, 4:29 IST
   

ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್‌ನಿಂದಾಗಿ ಚೀನಾದಲ್ಲಿ ಮೃತಪಟ್ಟಿರುವವರ ಸಂಖ್ಯೆ ಏರಿಕೆಯಾಗಿದ್ದು, ಸೋಮವಾರ ಸಾವಿನ ಸಂಖ್ಯೆ 1,700ರ ಗಡಿ ದಾಟಿದೆ. ಹುಬೆ ಪ್ರಾಂತ್ಯದಲ್ಲಿ ಹೊಸದಾಗಿ ಸುಮಾರು 100 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕೊರೊನಾ ವೈರಸ್ ಸೋಂಕಿಗೆ 1,933 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ ಎಂದು ಆರೋಗ್ಯ ಆಯೋಗ ತಿಳಿಸಿದೆ. ಚೀನಾದಾದ್ಯಂತ ಇದುವರೆಗೂ ಸುಮಾರು 70,500 ಜನರು ಸೋಂಕಿಗೆ ಒಳಗಾಗಿದ್ದಾರೆ.

ಕಳೆದ ವಾರಅಧಿಕಾರಿಗಳು ಸೋಂಕು ತಗುಲಿರುವ ಪ್ರಕರಣಗಳನ್ನು ಪತ್ತೆಹಚ್ಚಲು ಮಾನದಂಡಗಳನ್ನು ಬದಲಾಯಿಸಿದ ಬಳಿಕ ಪ್ರಾಂತ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ದೊಡ್ಡ ಮಟ್ಟದಿಂದ ಕ್ಷೀಣಿಸಿದೆ.

ADVERTISEMENT

ಸೋಮವಾರದಲ್ಲಿ ವರದಿಯಾದ ಅಂಕಿಅಂಶಗಳು ಭಾನುವಾರದ ಅಂಕಿಅಂಶಗಳಿಗಿಂತ 100 ರಷ್ಟು ಹೆಚ್ಚಾಗಿದ್ದರೂ ಕೂಡ ಶುಕ್ರವಾರ ಮತ್ತು ಶನಿವಾರದ ಅಂಕಿಅಂಶಗಳಲ್ಲಿ ತೀವ್ರವಾಗಿ ಇಳಿಕೆಯಾಗಿದೆ.

ತೀವ್ರವಾಗಿ ಸೋಂಕಿನ ಹೊಡೆತಕ್ಕೆ ಸಿಲುಕಿದ್ದ ಹುಬೆ ಪ್ರಾಂತ್ಯದಲ್ಲಿ ಸೋಂಕು ಪೀಡಿತ ಹೊಸ ಪ್ರಕರಣಗಳು ಕ್ಷೀಣಿಸಿವೆ. ಫೆಬ್ರವರಿ 17ರ ಅಂಕಿ ಅಂಶಗಳು ಸೋಂಕು ತಗುಲುತ್ತಿರುವುದು ನಿಯಂತ್ರಣಕ್ಕೆ ಬರುತ್ತಿರುವುದನ್ನು ಸೂಚಿಸುತ್ತದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.

ಈ ಮಧ್ಯೆ 'ಕೊರೊನಾ ವೈರಸ್ ಸೋಂಕು ಯಾವ ದಿಕ್ಕನ್ನು ತೆಗೆದುಕೊಳ್ಳುತ್ತದೆ ಎಂದು ಊಹಿಸಲು ಅಸಾಧ್ಯವಾಗಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೊಸ್ ಅಧಾನಾಮ್ ಘೆಬ್ರೆಯೆಸ್ ಎಚ್ಚರಿಸಿದ್ದಾರೆ.

ಬೀಜಿಂಗ್‌ಗೆ ಆಗಮಿಸಿರುವ ಅಂತರರಾಷ್ಟ್ರೀಯ ತಜ್ಞರು ಸಾಂಕ್ರಾಮಿಕ ರೋಗದ ಬಗ್ಗೆ ತಮ್ಮ ಚೀನಾದ ಸಹವರ್ತಿಗಳನ್ನು ಭೇಟಿಯಾಗಿ ಚರ್ಚಿಸಲು ಪ್ರಾರಂಭಿಸಿದ್ದಾರೆ ಎಂದು ಟೆಡ್ರೊಸ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.