ADVERTISEMENT

ಕೊರೊನಾ ಭೀತಿ: 15 ಲಕ್ಷ ಮಂದಿ ಬ್ರಿಟಿಷರಿಗೆ ಮೂರು ತಿಂಗಳು ಗೃಹವಾಸ

ಏಜೆನ್ಸೀಸ್
Published 22 ಮಾರ್ಚ್ 2020, 7:23 IST
Last Updated 22 ಮಾರ್ಚ್ 2020, 7:23 IST
ಬ್ರಿಟನ್‌ನಲ್ಲಿ ಕೊರೊನಾ ಪಿಡುಗು ಹರಡುವಿಕೆ ತಡೆಗೆ ಕ್ರಮ
ಬ್ರಿಟನ್‌ನಲ್ಲಿ ಕೊರೊನಾ ಪಿಡುಗು ಹರಡುವಿಕೆ ತಡೆಗೆ ಕ್ರಮ   

ಲಂಡನ್: ಕೊರೊನಾ ವೈರಸ್ ಪೀಡೆ ಜಾಗತಿಕವಾಗಿ ತನ್ನ ಕಬಂಧ ಬಾಹು ಹರಡುತ್ತಿರುವಂತೆಯೇ, ಕೋವಿಡ್-19ನಿಂದಾಗುವ ಸಾವು ತಡೆಗಟ್ಟಲು ಮತ್ತು ವೈರಸ್ ಹರಡುವಿಕೆಯ ಪ್ರಮಾಣ ತಗ್ಗಿಸಲು ಬ್ರಿಟಿಷ್ ಸರ್ಕಾರ ಕಠಿಣ ಕ್ರಮಗಳನ್ನು ಘೋಷಿಸಿದೆ.

ವೈರಸ್ ಸೋಂಕಿನ ಸಾಧ್ಯತೆಯಿರುವ ಸುಮಾರು 15 ಲಕ್ಷ ಮಂದಿಯನ್ನು ಗುರುತಿಸಿರುವ ಯುಕೆ ಸರ್ಕಾರ, ಅವರೆಲ್ಲರೂ ಮೂರು ತಿಂಗಳು ಮನೆಯಿಂದ ಹೊರ ಬಾರದಂತೆ ನಿರ್ದೇಶನ ನೀಡಿದೆ.

ಎಲುಬು ಅಥವಾ ರಕ್ತದ ಕ್ಯಾನ್ಸರ್, ಸಿಸ್ಟಿಕ್ ಫೈಬ್ರೋಸಿಸ್ ಮುಂತಾದ ತೀವ್ರ ಕಾಯಿಲೆಗಳಿಂದ ಬಳಲುತ್ತಿರುವವರು ಅಥವಾ ಅಂಗಾಂಗ ಕಸಿಗೆ ಒಳಪಟ್ಟವರು ಕೊರೊನಾ ವೈರಸ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮನೆಯೊಳಗೇ ಇರುವಂತೆ ಆರೋಗ್ಯ ಅಧಿಕಾರಿಗಳು ಸೂಚಸಿದ್ದಾರೆ.

ADVERTISEMENT

"ತೀರಾ ಗಂಭೀರ ಆರೋಗ್ಯ ಸಮಸ್ಯೆ ಇರುವವರು ಮತ್ತು ರೋಗನಿರೋಧಕ ಶಕ್ತಿ ತೀರಾ ಕಡಿಮೆ ಇರುವವರು ದಯವಿಟ್ಟು ಮನೆಯೊಳಗೇ ಇರಬೇಕು" ಎಂದು ಸಮುದಾಯ ಇಲಾಖೆಯ ಕಾರ್ಯದರ್ಶಿ ರಾಬರ್ಟ್ ಜೆನ್ರಿಕ್ ಅವರು ಹೇಳಿಕೊಂದರಲ್ಲಿ ತಿಳಿಸಿದ್ದಾರೆ.

ಈ ರೀತಿ ವೈದ್ಯರ ಮೂಲಕ ಗುರುತಿಸಿ ಸಂಪರ್ಕಿಸಲಾದವರನ್ನು ಕನಿಷ್ಠ 12 ವಾರಗಳ ಕಾಲ ಮನೆಯೊಳಗೇ ಇರುವಂತೆ ಸೂಚಿಸಲಾಗುತ್ತಿದೆ. ಅವರಿಗೆ ಸೂಕ್ತ ಫೋನ್ ಸಂಪರ್ಕ ಮತ್ತು ದಿನಸಿ ವಸ್ತುಗಳು ಅಥವಾ ಔಷಧಿ ಪೂರೈಕೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅವರೆಲ್ಲರೂ ಶಾಪಿಂಗ್ ಅಥವಾ ವಿಹಾರ ಇಲ್ಲವೇ ಪ್ರವಾಸಕ್ಕೆ ಹೋಗುವಂತಿಲ್ಲ ಎಂದೂ ಸೂಚಿಸಲಾಗಿದೆ.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಯುಕೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕಿನಿಂದಾಗಿ 177 ಮಂದಿ ಸಾವನ್ನಪ್ಪಿದ್ದು, ಸೋಂಕು ಹರಡುವಿಕೆ ತಡೆಗೆ ಬೋರಿಸ್ ಜಾನ್ಸನ್ ಆಡಳಿತವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಬಾರ್, ಪಬ್ ಮತ್ತು ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಲಾಗಿದ್ದು, ಪ್ರವಾಸಿ ತಾಣಗಳಲ್ಲಿಯೂ ನಿರ್ಬಂಧ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.