ADVERTISEMENT

ಕೊರೊನಾ ವೈರಸ್‌ | ವಿಶ್ವದಲ್ಲಿ ಈಗ ಹೇಗಿದೆ ಪರಿಸ್ಥಿತಿ?

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 5:07 IST
Last Updated 9 ಏಪ್ರಿಲ್ 2020, 5:07 IST
   
""

ಸೋಂಕಿತರು 1,518,719, ಸಾವಿನ ಸಂಖ್ಯೆ 88,502, ಗುಣವಾದವರು ಸಂಖ್ಯೆ 330,589... ಇದು ಸದ್ಯ ಕೊರೊನಾ ವೈರಸ್‌ನ ಜಾಗತಿಕ ಅಂಕಿ ಸಂಖ್ಯೆಗಳು.

ಕೊರೊನಾ ವೈರಸ್‌ನಿಂದ ಸಂಭವಿಸಿದ ಸಾವುಗಳ ಸಂಖ್ಯೆಯಲ್ಲಿ ಅಮೆರಿಕ ಇಂದು ಸ್ಪೇನ್‌ ಅನ್ನು ಹಿಂದಿಕ್ಕಿ ಮುಂದೆ ಬಂದಿದೆ. ಗುರುವಾರದ ಲಭ್ಯ ಅಂಕಿ ಆಂಶಗಳ ಪ್ರಕಾರ ಅಮೆರಿಕದಲ್ಲಿ ಕೊರೊನಾ ವೈರಸ್‌ನಿಂದಾಗಿ 14,795 ಮಂದಿ ಸಾವಿಗೀಡಾಗಿದ್ದಾರೆ. ಅಮೆರಿಕದ ಸೋಂಕಿತರ ಸಂಖ್ಯೆ ಹತ್ತಿರ ಹತ್ತಿರ 4.5 ಲಕ್ಷವನ್ನು ಸಮೀಪಿಸಿದೆ. ಇನ್ನು ನಂತರದ ಸ್ಥಾನದಲ್ಲಿ ಸ್ಪೇನ್‌ ಇದ್ದು, ಅಲ್ಲಿನ ಸೋಂಕಿತರ ಸಂಖ್ಯೆ 148,220 ಆಗಿದೆ. ಸಾವಿನ ಸಂಖ್ಯೆ 14,792 ಆಗಿದೆ. ಆದರೆ, ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ಎಲ್ಲ ರಾಷ್ಟ್ರಗಳಿಗಿಂತಲೂ ಮುಂದಿದೆ.

ಇನ್ನು ಸಾವಿನ ಸಂಖ್ಯೆಯಲ್ಲಿ ಇಟಲಿ ಎಲ್ಲ ರಾಷ್ಟ್ರಗಳನ್ನೂ ಮೀರಿಸಿ ಮುಂದೆ ಹೋಗುತ್ತಿದ್ದು, ಈ ವರೆಗೆ 17,669 ಮಂದಿ ಮೃತಪಟ್ಟಿದ್ದಾರೆ. ಅಲ್ಲಿ 139,422 ಸೋಂಕಿತರಿದ್ದಾರೆ. ಫ್ರಾನ್ಸ್‌ನಲ್ಲೂ ಸಾವು ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲಿ ಈಗಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ADVERTISEMENT

ಸೋಂಕಿನ ತವರು ದೇಶ ಚೀನಾದಲ್ಲಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸಿಕ್ಕಿದೆ. ಅಲ್ಲಿ ಸದ್ಯ ಸಕ್ರಿಯವಾಗಿರುವ ಸೋಂಕು ಪ್ರಕರಣಗಳು 1160 ಮಾತ್ರ. ಆದರೆ, ಗುರುವಾರ ಅಲ್ಲಿ 2 ಹೊಸ ಸಾವು ಪ್ರಕರಣಗಳು ವರದಿಯಾಗಿವೆ. ಇನ್ನೊಂದು ಆಘಾತಕರ ಸಂಗತಿಯೊಂದು ಬಯಲಾಗಿದೆ. ಬುಧವಾರ ಅಲ್ಲಿ ಒಂದೇ ದಿನ 62 ಹೊಸ ಪ್ರಕರಣಗಳು ವರದಿಯಾದವು. ಹೊರದೇಶದಿಂದ ಬಂದವರೇ ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹೀಗಾಗಿ ಹೊರಗಿನ ಬೆದರಿಕೆಗಳು ಚೀನಾವನ್ನು ಮತ್ತೆ ಸಂಕಷ್ಟಕ್ಕೆ ದೂಡುವ ಆತಂಕ ಎದುರಾಗಿದೆ.

ಮಾಸ್ಕ್‌, ಗ್ಲೌಸ್‌ಗಳ ರಫ್ತು ನಿಲ್ಲಿಸಿದ ಅಮೆರಿಕ

ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿತರ ಪ್ರಮಾಣ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಮಾಸ್ಕ್‌ ಮತ್ತು ಗ್ಲೌಸ್‌ಗಳ ರಫ್ತನ್ನು ಗುರುವಾರದಿಂದ ನಿಷೇಧಿಸಿದೆ. ಅಮೆರಿಕದಲ್ಲಿ ಮಾಸ್ಕ್‌, ಗ್ಲೌಸ್‌ಗಳ ಅಗತ್ಯ ಮತ್ತು ಪೂರೈಕೆಯಲ್ಲಿ ಭಾರಿ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿದೆ.

ಚೇತರಿಕೆ ಕಾಣುತ್ತಿರುವ ಬ್ರಿಟನ್‌ ಪ್ರಧಾನಿ

ಸೋಂಕಿನಿಂದಾಗಿ ಆಸ್ಪತ್ರೆಗೆ ಸೇರಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಎರಡು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರು. ಸದ್ಯ ಅವರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಧಾರಿಸಿದ್ದಾರೆ ಎಂದು ಅಲ್ಲಿನ ಚಾನ್ಸಲರ್‌ ರಿಷಿ ಸುನಾಕ್‌ ತಿಳಿಸಿದ್ದಾರೆ.

ವೆಂಟಿಲೇಟರ್‌ ಉತ್ಪಾದನೆಗೆ ಸೂಚನೆ

ಚೀನಾದಿಂದ ವೆಂಟಿಲೇಟರ್‌ಗಳ ಪೂರೈಕೆ ಕುಸಿದಿದೆ. ಹೀಗಾಗಿ ಬ್ರೆಜಿಲ್‌ ತನ್ನ ದೇಶದ ಎಲ್ಲ ಕಾರ್ಖಾನೆಗಳು, ಉದ್ದಿಮೆಗಳು ವೆಂಟಿಲೇಟರ್‌ಗಳನ್ನು ಉತ್ಪಾದಿಸಬೇಕು ಎಂದು ತಾಕೀತು ಮಾಡಿದೆ.

ಜಪಾನ್‌ ಆರ್ಥಿಕತೆಗೆ ಹೊಡೆತ

ಕೊರೊನಾ ವೈರಸ್‌ನ ಪರಿಣಾಮದಿಂದಾಗಿ ಜಪಾನ್‌ನ ಆರ್ಥಿಕತೆ ತೀವ್ರವಾಗಿ ಕುಸಿದಿದೆ ಎಂದು ಅಲ್ಲಿನ ಕೇಂದ್ರ ಬ್ಯಾಂಕ್‌ನ ಮುಖ್ಯಸ್ಥರು ತಿಳಿಸಿದ್ದಾರೆ.

ಮೂರು ವಾರಗಳಲ್ಲಿ ಕುಸಿದ ವೈರಸ್‌ ಹರಡುವಿಕೆ

ಆಸ್ಟ್ರೇಲಿಯಾದ ಮೂರು ವಾರಗಳಲ್ಲೇ ಅತ್ಯಂತ ಕಡಿಮೆ ಎನಿಸಿದ ಪ್ರಕರಣಗಳು ಗುರುವಾರ ವರದಿಯಾಗಿವೆ. ಗುರುವಾರ ಅಲ್ಲಿ ವರದಿಯಾಗಿದ್ದು 96 ಪ್ರಕರಣಗಳು. ಮೂರು ವಾರಗಳ ಹಿಂದೆ ಆ ಪ್ರಮಾಣ 100 ಆಗಿತ್ತು. ಮಾರ್ಚ್‌ 28ರಂದು ಅಲ್ಲಿ ಅತಿ ಹೆಚ್ಚು ಪ್ರಕರಣ ವರದಿಯಾಗಿತ್ತು. ಅಂದು 457 ಪ್ರಕರಣಗಳು ಕಂಡು ಬಂದಿದ್ದವು ಎಂದು ಆರೋಗ್ಯ ಸಚಿವ ಗರ್ಗ್‌ ಹಂಟ್‌ ಹೇಳಿದ್ದಾರೆ.

ಒಗ್ಗಟ್ಟಾಗಬೇಕಿದೆ: ವಿಶ್ವ ಆರೋಗ್ಯ ಸಂಸ್ಥೆ

ಜಗತ್ತು ಕೊರೊನಾ ವೈರಸ್‌ ವಿರುದ್ಧ ಒಗ್ಗೂಡಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊರೊನಾ ವೈರಸ್‌ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಡೆದುಕೊಂಡ ರೀತಿ ಸರಿಯಿರಲಿಲ್ಲ ಎಂಬ ಟ್ರಂಪ್‌ ಅವರ ಆರೋಪದ ಹಿನ್ನೆಲೆಯಲ್ಲೇ ವಿಶ್ವಸಂಸ್ಥೆ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಬೆಕ್ಕಿಗೂ ಬರುತ್ತದೆ ವೈರಸ್‌

ಕೊರೊನಾ ವೈರಸ್‌ ಇಡೀ ಜಗತ್ತನ್ನೇ ಬಾಧಿಸುತ್ತಿರುವ ಈ ಹೊತ್ತಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಬಿಡುಗಡೆ ಮಾಡಿರುವ ಮಾಹಿತಿಯು ನಾಗರಿಕರನ್ನು ಆತಂಕಕ್ಕೆ ದೂಡಿದೆ. ಸಾಕುಪ್ರಾಣಿ ಬೆಕ್ಕುಗಳಿಗೂ ಸೋಂಕು ತಗುಲುವ ಸಾಧ್ಯತೆ ಅಧಿಕವಾಗಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.