ವಾಷಿಂಗ್ಟನ್: ಜಗತ್ತಿನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಸೋಮವಾರ ರಾತ್ರಿ 1.30 ಕೋಟಿ ದಾಟಿದೆ. ಸದ್ಯ ಜಗತ್ತಿನಲ್ಲಿ 1,30,61,792 ಕೋವಿಡ್ ಪ್ರಕರಣಗಳಿವೆ ಎಂದು ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಕೋವಿಡ್ ಟ್ರ್ಯಾಕರ್ ತಿಳಿಸಿದೆ. ಮಹಾಮಾರಿಗೆ ವಿಶ್ವದಲ್ಲಿ 5,70,776 ಮಂದಿ ಪ್ರಾಣ ತೆತ್ತಿದ್ದಾರೆ ಎಂಬುದು ವೆಬ್‌ಸೈಟ್‌ನ ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ.
ಕೋವಿಡ್‌ನಿಂದಾಗಿ ಅಮೆರಿಕ ಜಗತ್ತಿನಲ್ಲೇ ಅತಿಹೆಚ್ಚು ಭಾದೆಗೆ ಒಳಗಾಗಿದೆ. ಅದರೆ, ಲ್ಯಾಟಿನ್ ಅಮೆರಿಕ ರಾಷ್ಟ್ರಗಳಾದ ಬ್ರೆಜಿಲ್, ಪೆರು, ಚಿಲಿ, ಅರ್ಜೆಂಟಿನಾದಲ್ಲಿ ಸೋಂಕು ದಿನೇ ದಿನೆ ವ್ಯಾಪಕವಾಗುತ್ತಿದೆ.
ಅಮೆರಿಕದಲ್ಲಿ 33,61,042 ಮಂದಿಗೆ ಸೋಂಕು ತಗುಲಿದ್ದರೆ, 1,35,582 ಮಂದಿ ಈ ವರೆಗೆ ಸಾವಿಗೀಡಾಗಿದ್ದಾರೆ. ನಂತರದ ಸ್ಥಾನದಲ್ಲಿ ಬ್ರೆಜಿಲ್ ಇದ್ದು ಇಲ್ಲಿ 18,84,967 ಸೋಂಕಿತರಿದ್ದಾರೆ. 72,833 ಮಂದಿ ಸಾವಿಗೀಡಾಗಿದ್ದಾರೆ. ಪೆರು 3,30,123 (12,054), ಚಿಲಿ 3,17,657 (7,024) ಅರ್ಜೆಂಟಿನಾ 1,03,265 (1,903) ಪ್ರಕರಣಗಳನ್ನು ಹೊಂದಿವೆ. ಇದರೊಂದಿಗೆ ಲ್ಯಾಟಿನ್ ಅಮೆರಿಕದ ಈ ಮೂರು ರಾಷ್ಟ್ರಗಳು ಕೋವಿಡ್ ಹಾಟ್‌ಸ್ಪಾಟ್‌ಗಳಾಗಿ ರೂಪಾಂತರಗೊಂಡಿವೆ. ಅಗ್ರ ಹತ್ತರ ಪಟ್ಟಿಯಲ್ಲಿ ಲ್ಯಾಟಿನ್ ಅಮೆರಿಕದ ಮೂರು ರಾಷ್ಟ್ರಗಳಿರುವುದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತಿರುವಂತಿದೆ.
ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 8,78,254 ಸೋಂಕು ಪ್ರಕರಣಗಳಿವೆ. ಭಾರತದಲ್ಲಿ 23,174 ಮಂದಿ ಮೃತಪಟ್ಟಿದ್ದಾರೆ. ರಷ್ಯಾದಲ್ಲಿ 7,32,547 ಕೊವಿಡ್ ಪ್ರಕರಣಗಳಿದ್ದು, 11,422 ಮಂದಿ ಕೊನೆಯುಸಿರೆಳಿದಿದ್ದಾರೆ. ಹೆಚ್ಚು ಸೋಂಕು ಪ್ರಕರಣಗಳಿದ್ದೂ, ರಷ್ಯಾದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ.
ಜಗತ್ತು ಕೆಲ ಕಾಲ ಸಹಜ ಸ್ಥಿತಿಗೆ ಬಾರದು: ಡಬ್ಲ್ಯುಎಚ್‌ಒ ಮುಖ್ಯಸ್ಥ
ಸಾಂಕ್ರಾಮಿಕ ರೋಗ ಕೋವಿಡ್, ಜಗತ್ತನ್ನು ಕೆಟ್ಟದಾಗಿ ಕಾಡುತ್ತಿದೆ. ನಾವು ಇನ್ನೂ ಸ್ವಲ್ಪ ಸಮಯದವರೆಗೆ “ಹಳೆಯ ಸಹಜ ಸ್ಥಿತಿಗೆ” ಮರಳಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಅಡಾನೊಮ್ ಗೆಬ್ರೆಯೆಸಸ್ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಈ ಮಾತು ಹೇಳಿದರು.
‘ಹಲವಾರು ದೇಶಗಳು, ವಿಶೇಷವಾಗಿ ಯುರೋಪ್ ಮತ್ತು ಏಷ್ಯಾದಲ್ಲಿ ಕೊರೊನಾ ವೈರಸ್ ಅನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೆ, ಬೇರೆ ಅನೇಕ ರಾಷ್ಟ್ರಗಳಲ್ಲಿ ಅದು ಕೆಟ್ಟ ಹಾದಿಯಲ್ಲಿ ಸಾಗುತ್ತಿದೆ,’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ಶಾಲೆಗಳನ್ನು ಆರಂಭಿಸುವ ವಿಚಾರವನ್ನು ಜಗತ್ತಿನ ರಾಷ್ಟ್ರಗಳು ರಾಜಕೀಯಕರಣ ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ದೈಹಿಕ ಅಂತರ ನೀತಿ ಕಠಿಣಗೊಳಿಸಿದ ಹಾಂಗ್‌ಕಾಂಗ್
ಹಾಂಗ್‌ಕಾಂಗ್ ಆಡಳಿತವು ಜನರು ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮಾನಿಸಿದೆ. ಸಾರ್ವಜನಿಕರ ಸಭೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಸಂಜೆ 6ರಿಂದ ಬೆಳಿಗ್ಗೆ 5ರವರೆಗೆ ರೆಸ್ಟೊರೆಂಟ್ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಫಿಟ್‌ನೆಸ್ ಮತ್ತು ಬ್ಯೂಟಿ ಸಲೋನ್‌ಗಳನ್ನು ಒಂದು ವಾರದ ಅವಧಿಗೆ ಬಾಗಿಲು ಹಾಕಲು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.