ADVERTISEMENT

Covid World Update: 13 ಲಕ್ಷದತ್ತ ಸಾಗಿದ ಜಾಗತಿಕ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 1:38 IST
Last Updated 13 ನವೆಂಬರ್ 2020, 1:38 IST
   

ನ್ಯೂಯಾರ್ಕ್‌: ಕೊರೊನಾ ವೈರಸ್‌ ಕಾರಣದಿಂದ ಸಂಭವಿಸಿದ ಸಾವಿನ ಸಂಖ್ಯೆಯು ಇದೀಗ 13 ಲಕ್ಷದ ಸಮೀಪಕ್ಕೆ ತಲುಪಿದೆ. ಪ್ರಪಂಚದಾದ್ಯಂತ ಇದುವರೆಗೆ ಒಟ್ಟು 12,91,837 ಸೋಂಕಿತರು ಕೋವಿಡ್–19ನಿಂದಾಗಿ ಮೃತಪಟ್ಟಿದ್ದು, ಇದರಲ್ಲಿ ಅರ್ಧದಷ್ಟು ಸಾವು ಅಮೆರಿಕ, ಬ್ರೆಜಿಲ್‌, ಭಾರತ ಮತ್ತು ಮೆಕ್ಸಿಕೊ ದೇಶಗಳಲ್ಲಿಯೇ ಸಂಭವಿಸಿದೆ.

ಜಾನ್ಸ್‌ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಅತಿಹೆಚ್ಚು (1,05,26,906) ಸೋಂಕು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಇದುವರೆಗೆ ಒಟ್ಟು 2,42,621 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಬ್ರೆಜಿಲ್‌ ಹಾಗೂ ಭಾರತದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಸಾವು ಸಂಭವಿಸಿದೆ.

ಬ್ರೆಜಿಲ್‌ನಲ್ಲಿ ಇದುವರೆಗೆ ಒಟ್ಟು 5,781,582 ಸೋಂಕು ಪ್ರಕರಣಗಳು ವರದಿಯಾಗಿದ್ದು, 1,64,281 ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ 86,83,916 ಮಂದಿಗೆ ಸೋಂಕು ತಗುಲಿದ್ದು, ಇದರಲ್ಲಿ 1.28,121 ಸೋಂಕಿತರು ಸಾವಿಗೀಡಾಗಿದ್ದಾರೆ. ಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳ ಸಾಲಿನಲ್ಲಿ ಮೆಕ್ಸಿಕೊ (96,430) ಮತ್ತು ಇಂಗ್ಲೆಂಡ್‌ (51,020) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ.

ADVERTISEMENT

ಕ್ಯಾಲಿಫೋರ್ನಿಯಾದಲ್ಲಿ 10 ಲಕ್ಷ ಜನರಿಗೆ ಸೋಂಕು
10 ಲಕ್ಷಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ವರದಿಯಾದ ಅಮೆರಿಕದ ಎರಡನೇ ರಾಜ್ಯ ಎಂಬ ಅಪಖ್ಯಾತಿ ಕ್ಯಾಲಿಫೋರ್ನಿಯಾದ್ದಾಯಿತು. ವರ್ಡೋಮೀಟರ್ ಮಾಹಿತಿ ಪ್ರಕಾರ ಇಲ್ಲಿ ಈವರೆಗೆ ಒಟ್ಟು 10,06,991 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 18,140 ಮಂದಿ ಮೃತಪಟ್ಟಿದ್ದು, 5,06,798 ಜನರು ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ 10 ಲಕ್ಷ ಪ್ರಕರಣಗಳು ವರದಿಯಾದ ಮೊದಲ ರಾಜ್ಯ ಟೆಕ್ಸಾಸ್‌. ಇಲ್ಲಿ 10,65,432 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 19,730 ಸೋಂಕಿತರು ಮೃತಪಟ್ಟಿದ್ದರೆ, 8,66,181 ಮಂದಿ ಚೇತರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.