ADVERTISEMENT

ಭಾರತಕ್ಕೆ ವೈದ್ಯಕೀಯ ವಸ್ತುಗಳ ಉಚಿತ ರವಾನೆ: ಎಮಿರೇಟ್ಸ್‌ ಸಂಸ್ಥೆ

ಪಿಟಿಐ
Published 10 ಮೇ 2021, 8:09 IST
Last Updated 10 ಮೇ 2021, 8:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ‘ಭಾರತಕ್ಕೆ ಅವಶ್ಯಕ ವೈದ್ಯಕೀಯ ಮತ್ತು ‍ಪರಿಹಾರ ವಸ್ತುಗಳನ್ನು ಸಾಗಿಸುವ ನಿಟ್ಟಿನಲ್ಲಿ ಮಾನವೀಯ ವಾಯು ಸೇತುವೆಯನ್ನು ಸ್ಥಾಪಿಸಲಾಗಿದೆ’ ಎಂದು ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯು ತಿಳಿಸಿದೆ.

ದುಬೈನಲ್ಲಿರುವ ವಿಶ್ವದ ಅತಿದೊಡ್ಡ ಬಿಕ್ಕಟ್ಟು ಪರಿಹಾರ ಕೇಂದ್ರ ಇಂಟರ್‌ನ್ಯಾಷನಲ್‌ ಹ್ಯುಮಾನಿಟೇರಿಯನ್‌ ಸಿಟಿಯಲ್ಲಿ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯು ಈ ಘೋಷಣೆ ಮಾಡಿದೆ.

‘ಭಾರತದಲ್ಲಿ ಕೋವಿಡ್‌ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿವೆ. ಭಾರತಕ್ಕೆ ನೆರವು ನೀಡಲು ಮುಂದಾಗಿರುವ ಎಮಿರೇಟ್ಸ್‌ ಸಂಸ್ಥೆಯು ಭಾರತ ಮತ್ತು ದುಬೈ ನಡುವೆ ಮಾನವೀಯ ವಾಯು ಸೇತುವೆಯನ್ನು ಸ್ಥಾಪಿಸಿದೆ. ಇದರ ಮೂಲಕ ಭಾರತಕ್ಕೆ ಅವಶ್ಯಕ ವೈದ್ಯಕೀಯ ಮತ್ತು ಪರಿಹಾರ ವಸ್ತುಗಳನ್ನು ಕಳುಹಿಸಲಾಗುವುದು’ ಎಂದು ಎಮಿರೇಟ್ಸ್‌ ಭಾನುವಾರ ಟ್ವೀಟ್‌ ಮಾಡಿದೆ.

ADVERTISEMENT

‘ಎಮಿರೇಟ್ಸ್‌ ಮತ್ತು ಯುಎಇ ಭಾರತದೊಂದಿಗೆ ಇದೆ. ನಾವು ಮಾನವೀಯ ವಾಯು ಸೇತುವೆಯನ್ನು ಪ್ರಾರಂಭಿಸಿದ್ದೇವೆ. ವೈದ್ಯಕೀಯ ವಸ್ತುಗಳನ್ನು ಭಾರತಕ್ಕೆ ಉಚಿತವಾಗಿ ರವಾನೆ ಮಾಡಲಿದ್ದೇವೆ. ಇದರಿಂದ ಎನ್‌ಜಿಒಗಳಿಗೆ ಸಾಗಣೆಯ ವೆಚ್ಚ ಉಳಿಯಲಿದೆ. ನಮ್ಮ ಎಲ್ಲಾ ವಿಮಾನಗಳ ಮೂಲಕ ಭಾರತದ 9 ನಗರಗಳಿಗೆ ವೈದ್ಯಕೀಯ ವಸ್ತುಗಳನ್ನು ಸಾಗಿಸಲಿದ್ದೇವೆ’ ಎಂದು ಸಂಸ್ಥೆ ತಿಳಿಸಿದೆ.

‘ಭಾರತವು ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ನೆರವು ಕಲ್ಪಿಸಲು ಭಾರತ ಮತ್ತು ದುಬೈ ನಡುವೆ ವಾಯು ಸೇತುವೆಯನ್ನು ಸ್ಥಾಪಿಸಲಾಗಿದ್ದು, ಈ ಸೇವೆಯು ತಕ್ಷಣದಿಂದ ಕಾರ್ಯ ನಿರ್ವಹಿಸಲಿದೆ’ ಎಂದು ಎಮಿರೇಟ್ಸ್‌ ಸ್ಕೈ ಕಾರ್ಗೊದ ಹಿರಿಯ ಉಪಾಧ್ಯಕ್ಷ ನಾಬಿಲ್‌ ಸುಲ್ತಾನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.