ADVERTISEMENT

ವಿಮಾನ ಹಾರಾಟಕ್ಕೆ ವಾಯುಪ್ರದೇಶ ಮುಕ್ತಗೊಳಿಸುವುದನ್ನು ಮುಂದೂಡಿದ ಶ್ರೀಲಂಕಾ

ಪಿಟಿಐ
Published 26 ಡಿಸೆಂಬರ್ 2020, 7:51 IST
Last Updated 26 ಡಿಸೆಂಬರ್ 2020, 7:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲಂಬೊ: ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ತನ್ನ ವಾಯುಪ್ರದೇಶವನ್ನು ಮುಕ್ತಗೊಳಿಸುವುದನ್ನು ಶ್ರೀಲಂಕಾ ಮುಂದೂಡಿದೆ. ಈ ಮೊದಲು ನಿಗದಿಯಾದಂತೆ ದ್ವೀಪರಾಷ್ಟ್ರವು ತನ್ನ ವಾಯುಪ್ರದೇಶವನ್ನು ಶನಿವಾರ ಮುಕ್ತಗೊಳಿಸಬೇಕಿತ್ತು.

ಹೊಸ ಸ್ವರೂಪದ ಕೊರೊನಾ ವೈರಸ್‌ ಪ್ರಸರಣವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀಲಂಕಾ ನಾಗರಿಕ ವಿಮಾನಯಾನ ಪ್ರಾಧಿಕಾರವು (ಸಿಎಎಎಸ್‌ಎಲ್‌) ತಿಳಿಸಿದೆ.

ವಿಮಾನ ಸೇವೆ ಪುನರಾರಂಭಿಸುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ತಿಳಿಸಿದೆ. ಕೋವಿಡ್‌ನಿಂದ ಕಳೆದ 8 ತಿಂಗಳಿನಿಂದ ಸ್ಥಗಿತಗೊಳಿಸಲಾಗಿದ್ದ ವಿಮಾನ ಸೇವೆಯನ್ನು ಡಿ.26ರಂದು ಪ್ರಾರಂಭಿಸುವುದಾಗಿ ಪ್ರಾಧಿಕಾರ ಹೇಳಿತ್ತು.

ADVERTISEMENT

‘ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್‌ ತೀವ್ರಗತಿಯಲ್ಲಿ ಹರಡುತ್ತಿದೆ. ಹಾಗಾಗಿ ಇದರ ಪ್ರಸರಣವನ್ನು ತಡೆಯುವ ನಿಟ್ಟಿನಲ್ಲಿ ವಿಮಾನ ಸೇವೆ ಪುನರಾರಂಭವನ್ನು ಮುಂದೂಡಲಾಗಿದೆ’ ಎಂದು ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸೇವೆಗಳ ಅಧ್ಯಕ್ಷ ಜಿ.ಎ ಚಂದ್ರಸಿರಿ ತಿಳಿಸಿದರು.

‘ರಷ್ಯಾದ ಪ್ರವಾಸಿಗರನ್ನು ಹೊತ್ತ ವಿಮಾನ ಭಾನುವಾರ ಇಲ್ಲಿ ಬಂದಿಳಿಯಬೇಕಿತ್ತು. ಈಗ ವಾಯುಪ್ರದೇಶವನ್ನು ಮುಕ್ತಗೊಳಿಸುವುದನ್ನು ಮುಂದೂಡಿದ ಕಾರಣ, ರಷ್ಯಾ ವಿಮಾನ ಸಂಚಾರವನ್ನು ಸಹ ರದ್ದುಪಡಿಸಲಾಗಿದೆ’ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ರಾಜೀವ್ ಸೂರ್ಯರಚ್ಚಿ ಹೇಳಿದರು. ಆದರೆ ಯುಕ್ರೇನ್‌ ಪ್ರವಾಸಿಗರನ್ನು ಕರೆತರುತ್ತಿರುವ ವಿಮಾನವು ನಿಗದಿಯಂತೆ ಸೋಮವಾರ ಬಂದಿಳಿಯಲಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.