ADVERTISEMENT

Covid-19 World Updates: 2.24ಲಕ್ಷ ಹೊಸ ಪ್ರಕರಣ; 1.84ಲಕ್ಷ ಸೋಂಕಿತರು ಗುಣಮುಖ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 16:13 IST
Last Updated 18 ಡಿಸೆಂಬರ್ 2020, 16:13 IST
   

ವಾಷಿಂಗ್ಟನ್‌: ಪ್ರಪಂಚದಾದ್ಯಂತ ಇಂದು ಹೊಸದಾಗಿ 2.24 ಲಕ್ಷಕ್ಕೂ ಹೆಚ್ಚು ಕೋವಿಡ್‌–19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದೇ ವೇಳೆ 1.84 ಲಕ್ಷಕ್ಕೂ ಹೆಚ್ಚು ಸೋಂಕಿತರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ವರ್ಡೋಮೀಟರ್ ವೆಬ್‌ಸೈಟ್‌ ವರದಿಮಾಡಿದೆ.

ವೆಬ್‌ಸೈಟ್‌ ನೀಡಿರುವ ಮಾಹಿತಿ ಪ್ರಕಾರ ವಿಶ್ವದಾದ್ಯಂತ ಇದುವರೆಗೆ ಒಟ್ಟು 7.54 ಕೋಟಿ ಪ್ರಕರಣಗಳು ವರದಿಯಾಗಿವೆ. ಇಂದು ಈವರೆಗೆ ವರದಿಯಾಗಿರುವ 4,926 ಸಾವಿನ ಪ್ರಕರಣಗಳೂ ಸೇರಿದಂತೆ 16.72 ಲಕ್ಷ ಮಂದಿ ಮೃತಪಟ್ಟಿದ್ದು, 5.30 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 2.07 ಕೋಟಿ ಸಕ್ರಿಯ ಪ್ರಕರಣಗಳು ಇವೆ.

ಅಮೆರಿಕದಲ್ಲಿ 1 ಕೋಟಿ ಸೋಂಕಿತರು ಗುಣಮುಖ
ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಈವರೆಗೆ 1.76 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 1.02 ಕೋಟಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 70.32 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ. ಇದರಲ್ಲಿ 28,198 ಜನರ ಸ್ಥಿತಿ ಗಂಭೀರವಾಗಿದೆ.

ADVERTISEMENT

ಅಮೆರಿಕದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ 99.87 ಲಕ್ಷ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 1.44 ಲಕ್ಷ ಸೋಂಕಿತರು ಮೃತಪಟ್ಟು, 95.30 ಲಕ್ಷ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 3.12 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ.

ಬ್ರೆಜಿಲ್‌ನಲ್ಲಿ 71.11 ಲಕ್ಷ, ರಷ್ಯಾದಲ್ಲಿ 27.91 ಲಕ್ಷ, ಫ್ರಾನ್ಸ್‌ನಲ್ಲಿ 24.27 ಲಕ್ಷ ಪ್ರಕರಣಗಳು ದಾಖಲಾಗಿವೆ.

ಅತಿಹೆಚ್ಚು ಸೋಂಕಿತರು ಮೃತಪಟ್ಟ ರಾಷ್ಟ್ರಗಳ ಸಾಲಿನಲ್ಲೂ ಅಮೆರಿಕ ಮೊದಲ ಸ್ಥಾನದಲ್ಲಿದೆ. ಈ ದೇಶದಲ್ಲಿ 3.08 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್‌ (1.84 ಲಕ್ಷ) ಎರಡನೇ ಸ್ಥಾನದಲ್ಲಿದ್ದು, ಮೂರನೇ ಸ್ಥಾನದಲ್ಲಿ ಭಾರತ (1.44 ಲಕ್ಷ), ನಾಲ್ಕನೇ ಸ್ಥಾನದಲ್ಲಿ ಮೆಕ್ಸಿಕೊ (1.16 ಲಕ್ಷ) ಇದೆ. ಉಳಿದಂತೆ ಇಟಲಿ (67 ಸಾವಿರ), ಇಂಗ್ಲೆಂಡ್‌ (66 ಸಾವಿರ) ಹಾಗೂ ಫ್ರಾನ್ಸ್‌ನಲ್ಲಿ (59 ಸಾವಿರ) 50 ಸಾವಿರಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.