ADVERTISEMENT

ಲಸಿಕೆ ಪಡೆದುಕೊಂಡಿದ್ದವರಿಗೂ ಕೋವಿಡ್‌; ಆಫ್ರಿಕಾ ತಳಿ ತಡೆಯುವುದೇ ಲಸಿಕೆ?

ಲಸಿಕೆ ಪಡೆದುಕೊಂಡಿದ್ದವರಿಗೂ ಕೋವಿಡ್‌ ತಂದ ಬಿ.1.1.529 ರೂಪಾಂತರ ತಳಿ

ರಾಯಿಟರ್ಸ್
Published 26 ನವೆಂಬರ್ 2021, 20:15 IST
Last Updated 26 ನವೆಂಬರ್ 2021, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್:‘ದಕ್ಷಿಣ ಅಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಾಣುವಿನ ಹೊಸ ತಳಿಬಿ.1.1.529 ವಿರುದ್ಧ ಕೋವಿಡ್‌ನ ಲಸಿಕೆಗಳು ಪರಿಣಾಮ ಬೀರುವ ಸಾಧ್ಯತೆ ಅತ್ಯಂತ ಕಡಿಮೆ’ ಎಂದು ಬ್ರಿಟನ್‌ನ ಆರೋಗ್ಯ ಸಚಿವಾಲಯ ಹೇಳಿದ ನಂತರ ವಿಶ್ವದ ಹಲವೆಡೆ ಕಳವಳ ವ್ಯಕ್ತವಾಗಿದೆ.

ಬೊಟ್ಸ್‌ವಾನಾದಲ್ಲಿ ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದುಕೊಂಡಿದ್ದವರಿಗೂ ಕೊರೊನಾ ಹೊಸ ರೂಪಾಂತರ ತಳಿ ತಗುಲಿದೆ. ಹೊಸ ರೂಪಾಂತರ ತಳಿಯ ರಚನೆಯು ಸಹ ಇದು ವೇಗವಾಗಿ ಮತ್ತು ಲಸಿಕೆಗಳು ಸೃಷ್ಟಿಸಿರುವ ಪ್ರತಿಕಾಯಗಳನ್ನು ತಪ್ಪಿಸಿ ಮನುಷ್ಯ ದೇಹವನ್ನು ಪ್ರವೇಶಿಸುತ್ತದೆ ಎಂಬುದು ಜಿನೋಮ್ ಸೀಕ್ವೆನ್ಸ್ ಅಧ್ಯಯನದಲ್ಲಿ ಪತ್ತೆಯಾಗಿದೆ.

‘ಮೂಲ ಕೊರೊನಾ ವೈರಾಣುವಿನಲ್ಲಿದ್ದ ಸ್ಪೈಕ್‌ ಪ್ರೊಟೀನ್‌ಗಳ (ಮನುಷ್ಯನ ದೇಹವನ್ನು ಸೇರಲು ನೆರವಾಗುವ ಮುಳ್ಳುಗಳು) ಸಂಖ್ಯೆ ಕಡಿಮೆ ಇತ್ತು. ಆಲ್ಫಾ ತಳಿಯಲ್ಲಿ ಈ ಸಂಖ್ಯೆ ಸ್ವಲ್ಪ ಹೆಚ್ಚಾಗಿತ್ತು. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ತಳಿಗಳಲ್ಲಿ ಇವುಗಳ ಸಂಖ್ಯೆ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿತ್ತು. ಇವುಗಳ ಸಂಖ್ಯೆ ಹೆಚ್ಚಿದ್ದಷ್ಟೂ, ಹರಡುವಿಕೆಯು ವೇಗ ಪಡೆಯುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವಬಿ.1.1.529 ತಳಿಯ ಪ್ರತೀ ವೈರಾಣುವಿನಲ್ಲಿ ಇಂತಹ 50 ಸ್ಪೈಕ್‌ ಪ್ರೊಟೀನ್‌ಗಳು ಇವೆ. ಹೀಗಾಗಿ ಇದು ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ’ ಎಂದು ಜಿನೋಮ್ ಸೀಕ್ವೆನ್ಸ್ ಅಧ್ಯಯನ ವರದಿ ಹೇಳಿದೆ.

ADVERTISEMENT

‘ಮೂಲ ಕೊರೊನಾ ವೈರಸ್‌ನಲ್ಲಿದ್ದ ಸ್ಪೈಕ್ ಪ್ರೊಟೀನ್‌ಗಳನ್ನು ಆಧರಿಸಿ, ಕೋವಿಡ್‌ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಈ ಲಸಿಕೆಗಳು ಹೆಚ್ಚುಸ್ಪೈಕ್‌ ಪ್ರೊಟೀನ್‌ ಇರುವ ತಳಿಯ ವಿರುದ್ಧ ಗರಿಷ್ಠ ಪ್ರಮಾಣದಲ್ಲಿ ಪರಿಣಾಮ ಬೀರುವುದಿಲ್ಲ ಎಂಬುದು ಗೊತ್ತಾಗಿದೆ. ಈಗ 50 ಸ್ಪೈಕ್ ಪ್ರೊಟೀನ್‌ಗಳು ಇರುವ ದಕ್ಷಿಣ ಆಫ್ರಿಕಾ ತಳಿಯ ವಿರುದ್ಧ ಈ ಲಸಿಕೆಗಳು ಕೆಲಸ ಮಾಡುವ ಸಾಧ್ಯತೆ ಅತ್ಯಂತ ಕಡಿಮೆ’ ಎಂದು ಬ್ರಿಟನ್ ಆರೋಗ್ಯ ಸಚಿವಾಲಯ ವಿವರಿಸಿದೆ.

ಹೆದರುವ ಅಗತ್ಯವಿಲ್ಲ: ಡಬ್ಲ್ಯುಎಚ್‌ಒ

ಆಫ್ರಿಕಾ ತಳಿಯು ಅಪಾಯಕಾರಿಯೇ ಅಥವಾ ಗಮನ ಹರಿಸಬೇಕಾದ ತಳಿಯೇ ಎಂಬುದನ್ನು ನಿರ್ಧರಿಸಲು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಜಿನಿವಾದಲ್ಲಿ ಶುಕ್ರವಾರ ಸಭೆ ನಡೆಸಿದೆ. ಈ ತಳಿಯ ಬಗ್ಗೆ ಈವರೆಗೆ ಲಭ್ಯವಿರುವ ಮಾಹಿತಿಗಳನ್ನು ಪರಿಶೀಲಿಸಿ ಇದನ್ನು ನಿರ್ಧರಿಸಲಾಗುತ್ತದೆ ಎಂದು ಸಂಸ್ಥೆಯು ತಿಳಿಸಿದೆ.

ಈಗ ಲಭ್ಯವಿರುವ ಲಸಿಕೆಗಳು ಈ ತಳಿಯ ವಿರುದ್ಧ ಕೆಲಸ ಮಾಡುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಲು ಇನ್ನೂ ಒಂದು ವಾರದ ಅವಶ್ಯಕತೆ ಇದೆ. ಹೀಗಾಗಿ ತಕ್ಷಣವೇ ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಸಂಸ್ಥೆಯು ಹೇಳಿದೆ.

****

*8 ದೇಶಗಳಲ್ಲಿ ಈ ತಳಿಯು ಪತ್ತೆಯಾಗಿದೆ
*200ಕ್ಕೂ ಹೆಚ್ಚು ಜನರಿಗೆ ಈ ತಳಿಯಿಂದ ಕೋವಿಡ್‌ ಹರಡಿದೆ

****

ನಮ್ಮ ಲಸಿಕೆ ಪಡೆದು ಕೊಂಡಿದ್ದವರಿಗೆ ಈ ತಳಿಯಿಂದ ಕೋವಿಡ್‌ ಬಂದಿದೆ. ಈ ತಳಿಯ ವಿರುದ್ಧ ನಮ್ಮ ಲಸಿಕೆ ಕೆಲಸ ಮಾಡುತ್ತದೆಯೇ ಎಂಬುದು 2 ವಾರದಲ್ಲಿ ಗೊತ್ತಾಗಲಿದೆ

-ಫೈಜರ್ ಮತ್ತು ಬಯೊಎನ್‌ಟೆಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.