ADVERTISEMENT

Covid-19 World Update | 2 ಕೋಟಿ ದಾಟಿದ ಕೊರೊನಾ ಸೋಂಕಿತರು, 7.37 ಲಕ್ಷ ಸಾವು

ಏಜೆನ್ಸೀಸ್
Published 11 ಆಗಸ್ಟ್ 2020, 16:03 IST
Last Updated 11 ಆಗಸ್ಟ್ 2020, 16:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಾಷಿಂಗ್ಟನ್: ಜಗತ್ತಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 2 ಕೋಟಿ ದಾಟಿದೆ. ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ಸಂಪನ್ಮೂಲ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಸೋಂಕಿತರ ಸಂಖ್ಯೆ 2,01,30,206 ಆಗಿದೆ. ಇಲ್ಲಿಯವರೆಗೆ ಸಾವಿಗೀಡಾವರ ಸಂಖ್ಯೆ 7,37,285 ಆಗಿದೆ.1,23,82,856 ಮಂದಿ ಜಗತ್ತಿನಾಂದ್ಯಂತ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ 51,00,636 ಮಂದಿಗೆ ಸೋಂಕು ತಗುಲಿದ್ದು 1,63,533ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ 30,57,470, ಭಾರತ-22,68,675, ರಷ್ಯಾ-8,95,691 ಸೋಂಕಿತರಿದ್ದಾರೆ. ಈವರೆಗೆ ಬ್ರೆಜಿಲ್‌ನಲ್ಲಿ1,01,752​, ಮೆಕ್ಸಿಕೊದಲ್ಲಿ 53,003 ಮಂದಿ ಮೃತಪಟ್ಟಿದ್ದಾರೆ.

ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟ್ರೆಡೋಸ್ ಅದಾನೊಮ್ ಗೆಬ್ರಿಯಾಸ್ ಈ ಅಂಕಿಅಂಶಗಳ ಹಿಂದೆ ಅತೀವ ನೋವು ಮತ್ತು ಯಾತನೆ ಇದೆ ಎಂದು ಹೇಳಿದ್ದಾರೆ. ಈ ಪಿಡುಗನ್ನು ನಿಯಂತ್ರಣಕ್ಕೆತರಲು ಇನ್ನೂ ಕಾಲ ಮಿಂಚಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರವಾಂಡಾ ಮತ್ತು ನ್ಯೂಜಿಲೆಂಡ್‌ನಲ್ಲಿ ಯಾವ ರೀತಿ ಕೋವಿಡ್ ನಿಯಂತ್ರಣಕ್ಕೆ ತರಲಾಯಿತು ಎಂದು ಉದಾಹರಿಸಿದಅವರು ಕುಕ್ ಐಲ್ಯಾಂಡ್‌ನಲ್ಲಿ ವೈರಸ್ ಮುಕ್ತ ಟ್ರಾವೆಲ್ ಬಬಲ್ ಆರಂಭಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ.

ADVERTISEMENT

ಕೋವಿಡ್ ಪಿಡುಗು ಮತ್ತು ಲಾಕ್‌ಡೌನ್‌ನಿಂದಾಗಿ ಆರ್ಥಿಕತೆಗೆ ಹೊಡೆತ ಬಿದ್ದಿದ್ದು, ಜನರ ಚಿತ್ತ ಲಸಿಕೆಯತ್ತ ಇದೆ ಎಂದಿದ್ದಾರೆ. ಜಗತ್ತಿನಾದ್ಯಂತ 165 ಲಸಿಕೆಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು ಈ ಪೈಕಿ 6 ಲಸಿಕೆಗಳು 3ನೇ ಹಂತರ ಕ್ಲಿನಿಕಲ್ ಪ್ರಯೋಗವರೆಗೆ ತಲುಪಿದೆ.

ಆದಾಗ್ಯೂ, ಲಸಿಕೆ ರೋಗವನ್ನು ನಿಯಂತ್ರಿಸುವ ಕಾರ್ಯದ ಒಂದು ಭಾಗವಾಗಿದೆ ಅಷ್ಟೇ. ಪೋಲಿಯೊ ಮತ್ತು ಮೀಸಲ್ಸ್‌ ರೋಗಳಿಗೆ ಲಸಿಕೆಗಳಿದ್ದರೂ ಅದನ್ನು ಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತುರ್ತು ವಿಭಾಗದ ನಿರ್ದೇಶಕ ಮೈಕಲ್ ರಯಾನ್ ಹೇಳಿದ್ದಾರೆ. ಲಸಿಕೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಸಿದ್ಧವಾದ ನಂತರ ಅದು ಎಲ್ಲ ಜನರನ್ನು ತಲುಪುವಂತಿರಬೇಕು ಎಂದುರಯಾನ್ ಅಭಿಪ್ರಾಯಪಟ್ಟಿದ್ದಾರೆ.

ಸಹಜ ಸ್ಥಿತಿಗೆ ಮರಳಿದ ವುಹಾನ್

ಮೊದಲ ಬಾರಿ ಕೊರೊನಾವೈರಸ್ ಕಾಣಿಸಿಕೊಂಡು ವ್ಯಾಪಕವಾಗಿ ರೋಗ ಹರಡಿದ್ದ ವುಹಾನ್ ಲಾಕ್‌ಡೌನ್ ನಂತರ ಸಹಜ ಸ್ಥಿತಿಗೆ ಮರಳಿದೆ. ಕೊರೊನಾವೈರಸ್ ಸೋಂಕು ನಿಯಂತ್ರಿಸಲು 76 ದಿನಗಳ ಲಾಕ್‌ಡೌನ್ ಮಾಡಿ, ಏಪ್ರಿಲ್ ತಿಂಗಳಲ್ಲಿ ಲಾಕ್‌ಡೌನ್ ತೆರವು ಮಾಡಲಾಗಿತ್ತು.

ಜಗತ್ತಿನಾದ್ಯಂತ ಈ ಸೋಂಕು ಹರಡುವ ಮುನ್ನ ವುಹಾನ್ ನಗರದಲ್ಲಿ 11 ದಶಲಕ್ಷ ಮಂದಿ ಕೋವಿಡ್ ಸೋಂಕು ತಗುಲಿತ್ತು. ಅಂತರ ಕಾಯ್ದುಕೊಳ್ಳುವುದು ಮತ್ತು ಸುರಕ್ಷಿತವಾಗಿರುವಂತೆ ಮುಂಜಾಗ್ರತೆ ವಹಿಸುವ ಮೂಲಕ ಅಲ್ಲಿನ ಜನರು ಸೋಂಕು ಮತ್ತಷ್ಟು ವ್ಯಾಪಿಸುವುದನ್ನು ತಡೆದಿದ್ದರು.

ಆದಾಗ್ಯೂ ಎಲ್ಲವೂ ಸಹಜ ಸ್ಥಿತಿಗೆ ಮರಳಿಲ್ಲ. ವರ್ಷದ ಮೊದಲಾರ್ಧದಲ್ಲಿ ಕೆಲವೊಂದು ಸಂಸ್ಥೆಗಳು ಮಾತ್ರ ಕಾರ್ಯವೆಸಗಿದ್ದವು ಎಂದು ಸ್ಥಳೀಯ ರಿಯಲ್ ಎಸ್ಟೇಟ್ ಕಂಪನಿಯೊಂದರ ಉದ್ಯೋಗಿ ಹು ಜೆಯು ಹೇಳಿರುವುದಾಗಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.