ADVERTISEMENT

ಕೋವಿಡ್-19: ಭಾರತಕ್ಕೆ ಹೆಚ್ಚಿನ ನೆರವು ನೀಡಲು ಬೈಡನ್‌ಗೆ ಸಂಸದೆ ಸ್ಟೀವನ್ಸ್ ಪತ್ರ

ಪಿಟಿಐ
Published 11 ಮೇ 2021, 6:05 IST
Last Updated 11 ಮೇ 2021, 6:05 IST
ಹ್ಯಾಲೆ ಸ್ಟೀವನ್ಸ್‌ಚಿತ್ರ: ಹಾಲೆ ಟ್ವಿಟರ್ ಖಾತೆ
ಹ್ಯಾಲೆ ಸ್ಟೀವನ್ಸ್‌ಚಿತ್ರ: ಹಾಲೆ ಟ್ವಿಟರ್ ಖಾತೆ   

ವಾಷಿಂಗ್ಟನ್‌: ಕೋವಿಡ್‌ ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಎದುರಿಸುತ್ತಿರುವ ಭಾರತಕ್ಕೆ ಹೆಚ್ಚುವರಿಯಾಗಿ ಹಾಗೂ ನೇರವಾಗಿ ನೆರವು ನೀಡುವಂತೆ ಅಮೆರಿಕದ ಸಂಸದೆ ಹ್ಯಾಲೆ ಸ್ಟೀವನ್ಸ್‌ ಅಧ್ಯಕ್ಷ ಜೋ ಬಿಡನ್ ಅವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ‘ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರವಾಗಿದೆ. ಮೇ 4 ರಂದು ಒಂದೇ ದಿನದಲ್ಲಿ 4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅಂದು 3,786 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದರು. ಇಲ್ಲಿವರೆಗೆ 2,26,188 ಮಂದಿ ಸೋಂಕಿನಿಂದಲೇ ಸತ್ತಿದ್ದಾರೆ. ಸೋಂಕು ಹೆಚ್ಚಾದಂತೆ ಆ ದೇಶದಲ್ಲಿ ಆರೋಗ್ಯ ವ್ಯವಸ್ಥೆ ಶಿಥಿಲಗೊಂಡಿದೆ. ಆಸ್ಪತ್ರೆಗಳು ಭರ್ತಿಯಾಗಿವೆ. ಹಾಸಿಗೆ ಕೊರತೆ ಎದುರಾಗಿದೆ. ಆಮ್ಲಜನಕದ ಪೂರೈಕೆಯ ಮೇಲೂ ಪರಿಣಾಮಬೀರಿದೆ. ಹೀಗಾಗಿ ಭಾರತಕ್ಕೆ ಆಮ್ಲಜನಕ, ಚಿಕಿತ್ಸಾ ಉಪಕರಣಗಳು ಮತ್ತು ಲಸಿಕೆಗಳ ಅಗತ್ಯವಿದೆ‘ ಎಂದು ವಿವರಿಸಿದ್ದಾರೆ.

ಭಾರತಕ್ಕೆ ನೀಡುತ್ತಿರುವ ಆಮ್ಲಜನಕದ ಸಿಲಿಂಡರ್‌ಗಳು, ರೆಮ್‌ಡಿಸಿವಿರ್ ಇಂಜೆಕ್ಷನ್‌ಗಳೂ, ಟೊಸಿಲಿಜುಮಾಬ್ ಮಾತ್ರೆಗಳು ಮತ್ತು ವೆಂಟಿಲೇಟರ್‌ಗಳ ಪ್ರಮಾಣವನ್ನು ಹೆಚ್ಚಿಸುವಂತೆ ಬೈಡನ್ ಅವರಿಗೆ ಮನವಿ ಮಾಡಿರುವ ಸ್ಟೀವನ್ಸ್‌, ಈವರೆಗೆ ಭಾರತಕ್ಕೆ 100 ದಶಲಕ್ಷ ಡಾಲರ್‌ಗಿಂತ ಹೆಚ್ಚಿನ ಮೊತ್ತದ ನೆರವು ನೀಡಿರುವುದಕ್ಕೆ ಧನ್ಯವಾದ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.