ADVERTISEMENT

ಭಾರತ–ಜಪಾನ್‌ ಶೃಂಗ ಸಭೆ: ನೆಲದಿಂದ ಆಗಸದೆತ್ತರ ಸಹಕಾರ

ಪಿಟಿಐ
Published 29 ಅಕ್ಟೋಬರ್ 2018, 20:43 IST
Last Updated 29 ಅಕ್ಟೋಬರ್ 2018, 20:43 IST
ಪ್ರಧಾನಿ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೊ ಅಬೆ ಒಪ್ಪಂದಗಳಿಗೆ ಸಹಿ ಹಾಕಿದರು
ಪ್ರಧಾನಿ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೊ ಅಬೆ ಒಪ್ಪಂದಗಳಿಗೆ ಸಹಿ ಹಾಕಿದರು   

ಟೋಕಿಯೊ: ವಿದೇಶಿ ವಿನಿಮಯ ಮತ್ತು ಬಂಡವಾಳ ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿಸುವ ಉದ್ದೇಶದೊಂದಿಗೆ ಭಾರತ–ಜಪಾನ್‌ ₹5.40 ಲಕ್ಷ ಕೋಟಿ ಮೊತ್ತದ ‘ದ್ವಿಪಕ್ಷೀಯ ಕರೆನ್ಸಿ ವಿನಿಮಯ ಒಪ್ಪಂದ’ಕ್ಕೆ ಸೋಮವಾರ ಸಹಿ ಹಾಕಿವೆ.

ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲ್‌ನಿಂದ ಸೈಬರ್‌ವರೆಗೆ, ಸಾಗರದಿಂದ ಬಾಹ್ಯಾಕಾಶದವರೆಗೆ ಮತ್ತು ಆರೋಗ್ಯ ಕ್ಷೇತ್ರದಿಂದ ರಕ್ಷಣಾ ಕ್ಷೇತ್ರದವರೆಗೂ ನಮ್ಮ ಸಹಭಾಗಿತ್ವ ಬಲಗೊಳ್ಳಲಿದೆ
ಎಂದರು.

ಆರ್ಥಿಕ ಮತ್ತು ಹಣಕಾಸು ಸಹಕಾರ ಬಲಪಡಿಸಲು ಕರೆನ್ಸಿ ವಿನಿಮಯ ಒಪ್ಪಂದ ನೆರವಾಗಲಿದೆ. ಅಗತ್ಯ ಬಿದ್ದಾಗ ಈ ಮೊತ್ತವನ್ನು ಭಾರತ ಬಳಸಿಕೊಳ್ಳಬಹುದಾಗಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ
ತಿಳಿಸಿದೆ.

ADVERTISEMENT

2014ರಲ್ಲಿಯೂ ಎರಡೂ ರಾಷ್ಟ್ರಗಳು ಕರೆನ್ಸಿ ವಿನಿಮಯ ಒಪ್ಪಂದ ಮಾಡಿಕೊಂಡಿದ್ದವು. ಆದರೆ, ಅಂದಿನ ಮೊತ್ತಕ್ಕಿಂತ ಹೊಸ ಒಪ್ಪಂದದ ಮೊತ್ತ ದುಪ್ಪಟ್ಟಾಗಿದೆ.

ಸಚಿವರ ಮಟ್ಟದಲ್ಲಿ 2+2 ಮಾತುಕತೆ:ಎರಡೂ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರ ಮಟ್ಟದ ‘2+2 ಮಾತುಕತೆ’ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೊ ಅಬೆ ಸಮ್ಮತಿ ಸೂಚಿಸಿದ್ದಾರೆ.

ಉಭಯ ರಾಷ್ಟ್ರಗಳ ಕಾರ್ಯತಂತ್ರ ಮತ್ತು ಪ್ರಾದೇಶಿಕ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಈ ಮಾತುಕತೆ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಲಾಗಿದೆ.ಇಲ್ಲಿಯವರೆಗೆ ಜಪಾನ್‌ ಮತ್ತು ಭಾರತದ ನಡುವೆ ಸಹಾಯಕ ಸಚಿವರ ಮಟ್ಟದಲ್ಲಿ ಮಾತ್ರ ಈ ರೀತಿಯ ಮಾತುಕತೆ ನಡೆದಿದೆ.

ಜಪಾನ್‌ ಹೂಡಿಕೆದಾರರು ಭಾರತದ ವಿವಿಧ ಯೋಜನೆಗಳಲ್ಲಿ ₹18 ಸಾವಿರ ಕೋಟಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇದರಿಂದ 30 ಸಾವಿರ ಹೊಸ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಮೋದಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಭಾರತದಲ್ಲಿ ತಯಾರಿಸಿ’ ಜಾಗತಿಕ ಬ್ರ್ಯಾಂಡ್‌ ಆಗಿದೆ. ಎನ್‌ಡಿಎ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿಂದ ನವ ಭಾರತ ನಿರ್ಮಾಣವಾಗುತ್ತಿದೆ. ಈ ಕಾರ್ಯದಲ್ಲಿ ಕೈಜೋಡಿಸುವಂತೆ ಅವರು ಜಪಾನ್‌ ಉದ್ಯಮಿಗಳಿಗೆ ಆಹ್ವಾನ ನೀಡಿದರು.

2023ರ ವೇಳೆಗೆ ಕಾರ್ಯಾರಂಭ ಮಾಡಲಿರುವ ಮುಂಬೈ–ಅಹಮದಾಬಾದ್‌ ಹೈಸ್ಪೀಡ್‌ ರೈಲು ಯೋಜನೆ ಪ್ರಗತಿಯ ಬಗ್ಗೆ ಮೋದಿ ಮತ್ತು ಶಿಂಜೊ ಮಾಹಿತಿ ವಿನಿಮಯ ಮಾಡಿಕೊಂಡರು.

ಈ ಯೋಜನೆಗೆ ಜಪಾನ್‌ ಅಗ್ಗದ ಬಡ್ಡಿದರದಲ್ಲಿ ಸಾಲ ನೀಡಲಿದ್ದು, ಆ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳ ನಿಯೋಗಗಳು ಸಹಿ ಹಾಕಿವೆ.

***

ಭಾರತ ಮತ್ತು ಜಪಾನ್‌ ನಡುವೆ ಸಹಕಾರ ಇಲ್ಲದೆ 21ನೇ ಶತಮಾನ ಏಷ್ಯಾದ ಶತಮಾನವಾಗಲು ಸಾಧ್ಯವಿಲ್ಲ

–ನರೇಂದ್ರ ಮೋದಿ, ಪ್ರಧಾನಿ

ಜಪಾನ್‌–ಭಾರತ ನಡುವೆ ಬಲವಾದ ದ್ವಿಪಕ್ಷೀಯ ಸಂಬಂಧದಿಂದ ಪ್ರಾದೇಶಿಕ ಸ್ಥಿರತೆ

–ಶಿಂಜೊ ಅಬೆ, ಜಪಾನ್‌ ಪ್ರಧಾನಿ

***

ಬಂಡವಾಳ ಆಕರ್ಷಣೆಗೆ ಒತ್ತು

* ಅನಿವಾಸಿ ಭಾರತೀಯರು ಮತ್ತು ಸ್ಥಳೀಯ ಉದ್ಯಮಿಗಳ ಜತೆಗೆ ಮೋದಿ ಸಂವಾದ

* ಭಾರತದಲ್ಲಿ ಬಂಡವಾಳ ಹೂಡಿಕೆಗೆ ಜಪಾನ್‌ ಉದ್ಯಮಿಗಳಿಗೆ ಆಹ್ವಾನ

* ಭಾರತದಲ್ಲಿ ಮಿನಿ ಜಪಾನ್‌ ನಿರ್ಮಾಣ ಭರವಸೆ

* ಟೆಕ್‌ ಮಹೀಂದ್ರಾ ಮತ್ತು ಜಪಾನ್‌ನ ರಕುಟೆನ್‌ ಮೊಬೈಲ್‌ ನೆಟ್‌ವರ್ಕ್‌ ಸಹಭಾಗಿತ್ವದಲ್ಲಿ ಬೆಂಗಳೂರು, ಟೋಕಿಯೊದಲ್ಲಿ 5ಜಿ, 4ಜಿ ಲ್ಯಾಬ್‌ ಸ್ಥಾಪನೆ

* ಯೋಗ ಮತ್ತು ಆಯುರ್ವೇದ ಕ್ಷೇತ್ರದಲ್ಲಿ ಒಪ್ಪಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.