ನೈರೋಬಿ: ಕೆನ್ಯಾದಲ್ಲಿ ಪೊಲೀಸರ ದೌರ್ಜನ್ಯ ಹಾಗೂ ಕಳಪೆ ಆಡಳಿತದ ವಿರುದ್ಧ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಸರ್ಕಾರಿ ಸ್ಥಾಪಿತ ಮಾನವ ಹಕ್ಕುಗಳ ಆಯೋಗ ತಿಳಿಸಿದೆ.
ಹಿಂಸಾತ್ಮಕ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾಗೂ ಮಳಿಗೆಗಳಿಗೆ ಹಾನಿ ಮಾಡಲಾಗಿದೆ. ಎರಡು ಪೊಲೀಸ್ ಠಾಣೆಗಳನ್ನು ಪ್ರತಿಭಟನಕಾರರು ಧ್ವಂಸಗೊಳಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ಬ್ಲಾಗರ್ ಒಬ್ಬರು ಸಾವಿಗೀಡಾಗಿದ್ದರು. ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಒಬ್ಬ ಪ್ರತಿಭಟನಕಾರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಇದನ್ನು ಖಂಡಿಸಿ ದೇಶದ ಒಟ್ಟು 47 ಕೌಂಟಿಗಳ ಪೈಕಿ 23ರಲ್ಲಿ ಬುಧವಾರದಿಂದ ತೀವ್ರ ಪ್ರತಿಭಟನೆ ನಡೆಯುತ್ತಿದೆ.
ರಾಜಧಾನಿ ನೈರೋಬಿಯಲ್ಲಿ ಅನೇಕ ಮಳಿಗೆಗಳನ್ನು ಧ್ವಂಸಗೊಳಿಸಲಾಗಿದ್ದು, ಅಲ್ಲಿದ್ದ ವಸ್ತುಗಳನ್ನು ದೋಚಲಾಗಿದೆ. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಒಳಾಡಳಿತ ಸಚಿವ ಕಿಪ್ಚುಂಬಾ ಮುರ್ಕೊಮೆನ್ ಗುರುವಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.