ADVERTISEMENT

ಟರ್ಕಿ ಭೂಕಂಪದಲ್ಲಿ ಕಟ್ಟಡ ನಾಶ: ಗುತ್ತಿಗೆದಾರರ ಮೇಲೂ ಗದಾಪ್ರಹಾರ 

ಟರ್ಕಿ, ಸಿರಿಯಾದಲ್ಲಿ ಗೋಚರಿಸುತ್ತಿವೆ ಮನ ಕಲಕುವ ದೃಶ್ಯಗಳು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 15:31 IST
Last Updated 13 ಫೆಬ್ರುವರಿ 2023, 15:31 IST
   

ಅಂಕಾರಾ: ಸಾವಿರಾರು ಕಟ್ಟಡಗಳು ನೆಲಸಮ ಆಗಿರುವುದರಲ್ಲಿ ಕಂಪನದ ಜತೆಗೆ ಕಳಪೆ ನಿರ್ಮಾಣವೂ ಕಾರಣವೆಂಬ ದೂರುಗಳು ಟರ್ಕಿಯಾದ್ಯಂತ ವ್ಯಾಪಕವಾಗಿವೆ. ಇದರಿಂದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಟರ್ಕಿ ಸರ್ಕಾರ, ಭೂಕಂಪ ಸಂಬಂಧಿತ ಅಪರಾಧಗಳ ತನಿಖಾ ಬ್ಯೂರೊ ಸ್ಥಾಪಿಸುವುದಾಗಿ ಘೋಷಿಸಿದೆ.

ಈ ತನಿಖಾ ಸಂಸ್ಥೆ ಸಾಕ್ಷ್ಯಗಳನ್ನು ಸಂಗ್ರಹಿಸಲಿದೆ. ಕಟ್ಟಡಗಳ ನಿರ್ಮಾಣದಲ್ಲಿ ಜವಾಬ್ದಾರರಾದ ಗುತ್ತಿಗೆದಾರರು, ವಾಸ್ತುಶಿಲ್ಪಿಗಳು, ಭೂವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಗುರುತಿಸಿ, ಬಾಧ್ಯಸ್ಥರನ್ನಾಗಿಸಲು ಸೂಚಿಸಲಾಗಿದೆ. ಅಲ್ಲದೆ, ಕಟ್ಟಡ ಪರವಾನಗಿಗಳು ಮತ್ತು ಉದ್ಯೋಗ ಪರವಾನಗಿಗಳನ್ನು ಪರಿಶೀಲಿಸಿ ಸಂಬಂಧಿಸಿದವರ ಮೇಲೆ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಕಾನೂನು ಸಚಿವಾಲಯ ಹೇಳಿದೆ.

ಭೂಕಂಪ ತಾಳಿಕೊಳ್ಳದ ಕಟ್ಟಡಗಳ ಸಂಬಂಧ 131 ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳನ್ನು ಹೊಣೆ ಮಾಡಲಾಗಿದೆ. ಇವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಟರ್ಕಿಯ ಕಾನೂನು ಸಚಿವ ಬೆಕಿರ್ ಬೊಜ್ಡಾಗ್ ಹೇಳಿದ್ದಾರೆ.

ADVERTISEMENT

ಗಾಝಿಯಾನ್‌ಟೆಪ್‌ ಪ್ರಾಂತ್ಯದಲ್ಲಿ ಮೂವರನ್ನು ಬಂಧಿಸಿದ್ದು, ವಿಚಾರಣೆ ಬಾಕಿ ಇದೆ. ಇನ್ನೂ ಏಳು ಮಂದಿಯನ್ನು ವಶಕ್ಕೆ ಪಡೆದು, ದೇಶಬಿಡದಂತೆ ನಿರ್ಬಂಧ ಹೇರಲಾಗಿದೆ.

ಅದಿಯಾಮನ್‌ನಲ್ಲಿ ಹಲವು ಕಟ್ಟಡಗಳು ನಾಶವಾಗಿವೆ. ಇದರಿಂದ ಸರ್ಕಾರದ ಕ್ರಮಕ್ಕೆ ಹೆದರಿ, ದೇಶಬಿಡಲು ಮುಂದಾಗಿದ್ದ ಇಬ್ಬರು ಗುತ್ತಿಗೆದಾರರನ್ನು ಭಾನುವಾರ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಡಿಎಚ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ನನ್ನ ಆತ್ಮಸಾಕ್ಷಿಯು ಸ್ಪಷ್ಟವಿದೆ. ನಾನು 44 ಕಟ್ಟಡಗಳನ್ನು ನಿರ್ಮಿಸಿದ್ದೆ. ಅವುಗಳಲ್ಲಿ ನಾಲ್ಕು ನೆಲಸಮವಾಗಿವೆ. ನಿಯಮಾನುಸಾರವೇ ಕಟ್ಟಡಗಳನ್ನು ನಿರ್ಮಿಸಿದ್ದೆ’ ಎಂದು ಬಂಧಿತ ಗುತ್ತಿಗೆದಾರ ಯಾವುಜ್ ಕರಕಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಭೂಕಂಪ ತಾಳಿಕೊಳ್ಳುವ ಎಂಜಿನಿಯರಿಂಗ್ ಮಾನದಂಡಗಳನ್ನು ಪೂರೈಸುವಂತೆ ಟರ್ಕಿಯಲ್ಲಿ ಕಟ್ಟಡ ನಿರ್ಮಾಣ ನಿಯಮಾವಳಿ ರೂಪಿಸಲಾಗಿದೆ. ಆದರೆ, ಇವು ಕಾಗದಕ್ಕೆ ಸೀಮಿತವಾಗಿದ್ದು, ಜಾರಿಯಾಗಿಲ್ಲ.

ಭಾರತ, ಅಮೆರಿಕ, ಚೀನಾ ಸೇರಿ ಜಗತ್ತಿನ ಸುಮಾರು 74 ರಾಷ್ಟ್ರಗಳಿಂದ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿ ಟರ್ಕಿ ಮತ್ತು ಸಿರಿಯಾ ದೇಶಗಳ ಸೇನೆ ಮತ್ತು ರಕ್ಷಣಾ ಸಿಬ್ಬಂದಿ ಜತೆಗೆ ರಕ್ಷಣಾ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ.

ಕಳೆದ ಸೋಮವಾರ (ಫೆ.6) ನಸುಕಿನಲ್ಲಿ 7.8ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಾದ ನಂತರ 200ಕ್ಕೂ ಹೆಚ್ಚು ಕಂಪನಗಳು ಸಂಭವಿಸಿದ್ದವು.

6ರ ಬಾಲಕನ ರಕ್ಷಣೆ; ಮಹಿಳೆಯರ ಕಣ್ಣಲ್ಲಿ ಆನಂದ ಭಾಷ್ಪ

ಅದಿಯಾಮನ್‌ನಲ್ಲಿ ಅವಶೇಷಗಳಡಿ ಸಿಲುಕಿದ್ದ 6 ವರ್ಷದ ಬಾಲಕನನ್ನು ರಕ್ಷಣಾ ಸಿಬ್ಬಂದಿಯೊಬ್ಬರು ಸುರಕ್ಷಿತವಾಗಿ ಹೊರತಂದರು. ಅಲ್ಲಿ ಗುಂಪುಗೂಡಿದ್ದ ಮಹಿಳೆಯರ ಕಣ್ಣಲ್ಲಿ ಆನಂದಭಾಷ್ಪ. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಾಲಕನ್ನು ರಕ್ಷಿಸಿದ ದೃಶ್ಯ ‘ಹೆಬರ್ ಟರ್ಕ್’ ವಾಹಿನಿಯಲ್ಲಿ ಪ್ರಸಾರವಾಗಿದೆ.

ಹತಾಯ್‌ ಪ್ರಾಂತ್ಯದ ಅಂಟಾಕ್ಯಾದಲ್ಲಿ 20ರಿಂದ 30 ವರ್ಷದ ವ್ಯಕ್ತಿಯನ್ನು ರಕ್ಷಿಸಲಾಯಿತು. ಅವಶೇಷಗಳಡಿ ಸಿಲುಕಿದ್ದ 9 ಜನರಲ್ಲಿ ಈತನೂ ಒಬ್ಬನಾಗಿದ್ದ. ಆದರೆ, ಅಲ್ಲಿ ಬೇರೆಯವರ ಇರುವಿಕೆ ಬಗ್ಗೆ ಮೂರು ದಿನಗಳಿಂದ ಯಾವುದೇ ಸೂಚನೆ ಇಲ್ಲವೆಂದು ಆ ವ್ಯಕ್ತಿ ಹೇಳಿದ್ದಾನೆ. ಕಿರಿಖಾನ್‌‌ನಲ್ಲಿ 88 ವರ್ಷದ ವ್ಯಕ್ತಿಯನ್ನು ಜರ್ಮಿನಿ ಮತ್ತು ಟರ್ಕಿ ರಕ್ಷಣಾ ಸಿಬ್ಬಂದಿ ರಕ್ಷಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.