ADVERTISEMENT

ಟರ್ಕಿ–ಸಿರಿಯಾಗಳಲ್ಲಿ ಮತ್ತೆ 6.4ರಷ್ಟು ತೀವ್ರತೆಯ ಭೂಕಂಪ: 8 ಸಾವು

ಏಜೆನ್ಸೀಸ್
Published 21 ಫೆಬ್ರುವರಿ 2023, 11:01 IST
Last Updated 21 ಫೆಬ್ರುವರಿ 2023, 11:01 IST
ಟರ್ಕಿಯ ಹಾತೆ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಿಂದ ವಾಲಿದ ಕಟ್ಟಡ –ಎಎಫ್‌ಪಿ ಚಿತ್ರ
ಟರ್ಕಿಯ ಹಾತೆ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಿಂದ ವಾಲಿದ ಕಟ್ಟಡ –ಎಎಫ್‌ಪಿ ಚಿತ್ರ   

ಇಸ್ತಾಂಬುಲ್‌ (ಎಪಿ): ಇದೇ 6ರಂದು ಪ್ರಬಲ ಭೂಕಂಪಕ್ಕೆ ಸಿಲುಕಿ ನಲುಗಿದ್ದ ಟರ್ಕಿ ಮತ್ತು ಸಿರಿಯಾಗಳಲ್ಲಿ ಸೋಮವಾರ ಮತ್ತೆ ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ.

‘ಟರ್ಕಿಯ ಹಾತೆ ಪ್ರಾಂತ್ಯದ ಡೆಫ್ನೆಯಲ್ಲಿ ಭೂಕಂಪನ ಕೇಂದ್ರಬಿಂದು ಪತ್ತೆಯಾಗಿದೆ. ಟರ್ಕಿಯಲ್ಲಿ ಆರು ಮಂದಿ ಮೃತಪಟ್ಟು, 294 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 18 ಜನರ ಪರಿಸ್ಥಿತಿ ಗಂಭೀರವಾಗಿದೆ’ ಎಂದು ಟರ್ಕಿ ವಿಪತ್ತು ನಿರ್ವಹಣೆ ಅಧಿಕಾರಿಗಳು ತಿಳಿಸಿದ್ದಾರೆ. ಸಿರಿಯಾದಲ್ಲಿ ಮಹಿಳೆ ಮತ್ತು ಬಾಲಕಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ಪರ ಇರುವ ಮಾಧ್ಯಮ ಸಂಸ್ಥೆಗಳು ತಿಳಿಸಿವೆ.

ಫೆ.6ರಂದು ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲೂ ಹಾತೆ ಪ್ರಾಂತ್ಯ ಅತಿ ಹೆಚ್ಚು ಹಾನಿಗೊಳಗಾಗಿತ್ತು. ಸಾವಿರಾರು ಕಟ್ಟಡಗಳು ಧರೆಗುರುಳಿದ್ದವು. ಸೋಮವಾರ ಸಂಭವಿಸಿದ ಭೂಕಂಪದಿಂದ ಮತ್ತಷ್ಟು ಕಟ್ಟಡಗಳು ನೆಲಕ್ಕೆ ಅಪ್ಪಳಿಸಿವೆ. ಅಂತಕ್ಯದಲ್ಲಿರುವ ಗವರ್ನರ್‌ ಕಚೇರಿ ಸಹ ಹಾನಿಗೊಳಗಾಗಿದೆ.

ADVERTISEMENT

ಫೆ.6ರ ಭೂಕಂಪದಲ್ಲಿ ಟರ್ಕಿಯೊಂದರಲ್ಲೇ 41,156 ಜನರ ಸಹಿತ ಎರಡೂ ದೇಶಗಳಲ್ಲಿ 45,000ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದರು. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾದ ಕಟ್ಟಡಗಳ ಒಳಗೆ ಹೋಗದಂತೆ ಅಧಿಕಾರಿಗಳು ಸೂಚಿಸಿದ್ದರು. ಆದಾಗ್ಯೂ ಅಳಿದುಳಿದ ವಸ್ತುಗಳನ್ನು ತರಲು ಮನೆಯೊಳಗೆ ತೆರಳಿದ್ದ ಜನರು ಇದೀಗ ಮತ್ತೆ ಸಂಭವಿಸಿದ ಭೂಕಂಪದಿಂದಾಗಿ ಕಟ್ಟಡಗಳ ಒಳಗೆ ಸಿಲುಕಿಕೊಳ್ಳುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟರ್ಕಿಯ ಭೂಕಂಪ ಪೀಡಿತ 11 ಪ್ರಾಂತ್ಯಗಳಲ್ಲಿ 1.10 ಲಕ್ಷಕ್ಕೂ ಅಧಿಕ ಕಟ್ಟಡಗಳು ಭೂಕಂಪದಿಂದ ನಾಶವಾಗಿದ್ದು, ಈ ಕಟ್ಟಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಹೊಸದಾಗಿಯೇ ಕಟ್ಟಡ ನಿರ್ಮಿಸಬೇಕಾದ ಸ್ಥಿತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.