ADVERTISEMENT

ಡೆಲ್ಟಾ ರೂಪಾಂತರ ತಳಿಯ ಸೋಂಕು ಹೆಚ್ಚುವ ಸಾಧ್ಯತೆ: ಡಬ್ಲ್ಯುಎಚ್‌ಒ ಎಚ್ಚರಿಕೆ

ಪಿಟಿಐ
Published 1 ಜುಲೈ 2021, 8:33 IST
Last Updated 1 ಜುಲೈ 2021, 8:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ/ಜಿನಿವಾ: ವಿಶ್ವದ 100 ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ತಳಿಯ ಸೋಂಕು ಪ್ರಸರಣಗೊಂಡಿದ್ದು, ಮುಂಬರುವ ದಿನಗಳಲ್ಲಿ ಈ ರೂಪಾಂತರ ತಳಿಯ ಸೋಂಕು ಎಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಡೆಲ್ಟಾ ರೂಪಾಂತರ ತಳಿಯ ಸೋಂಕಿನಿಂದಾಗಿ ಹಲವು ದೇಶಗಳಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ ಎಂದೂ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌–19 ಪಿಡುಗು ಕುರಿತ ವಾರದ ದತ್ತಾಂಶದ ಪ್ರಕಾರ, ‘ಜೂನ್ 29 ರವರೆಗೆ, 96 ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿಯ ಸೋಂಕು ಪ್ರಸರಣಗೊಂಡಿದೆ. ರೂಪಾಂತರ ತಳಿಗಳ ಪತ್ತೆಗೆ ಅಗತ್ಯವಾದ ಪರಿಕರಗಳ ಕೊರತೆಯ ಕಾರಣವೂ ಡೆಲ್ಟಾ ರೂಪಾಂತರ ತಳಿ ವಿಶ್ವದ ಹಲವು ಭಾಗಗಳಿಗೆ ತೀವ್ರವಾಗಿ ವ್ಯಾಪಿಸಲು ಕಾರಣವಾಗಿದೆ.

ADVERTISEMENT

‘ಡೆಲ್ಟಾ ರೂಪಾಂತರ ತಳಿ ಪ್ರಸರಣದ ವೇಗವನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಈಗಿನ ಎಲ್ಲ ರೂಪಾಂತರ ತಳಿಗಳನ್ನು ಇದು ಮೀರಿಸಿ, ಪ್ರಬಲವಾದ ರೂಪಾಂತರ ತಳಿಯಾಗುವ ಸಾಧ್ಯತೆ ಇದೆ‘ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಪ್ರಸ್ತುತ ಕೊರೊನಾ ಪಿಡುಗಿನ ವಿರುದ್ಧದ ಹೋರಾಟಕ್ಕೆ ಕೈಗೊಳ್ಳುತ್ತಿರುವ ಸಾಧನಗಳು, ವೈಯಕ್ತಿಕ ಹಾಗೂ ಸಮುದಾಯದ ಹಂತದಲ್ಲಿ ಅನುಸರಿಸುತ್ತಿರುವ ಕ್ರಮಗಳು, ಸೋಂಕು ತಡೆ ಮತ್ತು ನಿಯಂತ್ರಣಕ್ಕಾಗಿ ಮಾಡುತ್ತಿರುವ ಎಲ್ಲ ಪ್ರಯತ್ನಗಳು, ಡೆಲ್ಟಾ ರೂಪಾಂತರ ತಳಿ ಸೇರಿದಂತೆ ಈಗಿರುವ ಎಲ್ಲ ರೂಪಾಂತರ ತಳಿಗಳಿಂದ ರಕ್ಷಿಸಿಕೊಳ್ಳುವುದಕ್ಕೂ ಅನುಸರಿಸಬೇಕು. ಈ ಎಲ್ಲ ಕ್ರಮಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ವಿಶ್ವಸಂಸ್ಥೆ ಹೇಳಿದೆ.

ಕೋವಿಡ್‌– 19 ರೂಪಾಂತರ ತಳಿಯ ಸೋಂಕಿನ ಪ್ರಸರಣ ಹೆಚ್ಚುತ್ತಿರುವ ಸ್ಥಳಗಳಲ್ಲಿ ದೀರ್ಘಕಾಲದವರೆಗೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ದೀರ್ಘಕಾಲದವರೆಗೆ ಮುಂದುವರಿಸಬೇಕಾಗುತ್ತದೆ. ಕೋವಿಡ್‌ ಲಸಿಕೆ ಪಡೆಯವವರ ಸಂಖ್ಯೆ ಕಡಿಮೆ ಇರುವ ಪ್ರದೇಶಗಳಲ್ಲಿ ಇಂಥ ಕ್ರಮಗಳನ್ನು ಕಡ್ಡಾಯವಾಗಿ ಮುಂದುವರಿಸಬೇಕು. ಲಸಿಕೆ ನೀಡುವ ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಬೇಕು‘ ಎಂದು ಡಬ್ಲ್ಯುಎಚ್‌ಒ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.