ADVERTISEMENT

ನ್ಯಾಟೊ ಕುರಿತ ಟ್ರಂಪ್‌ ಹೇಳಿಕೆ ಒಪ್ಪಲಾಗದು: ಡೆನ್ಮಾರ್ಕ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 15:42 IST
Last Updated 24 ಜನವರಿ 2026, 15:42 IST
   

ಕೋಪನ್‌ಹೇಗನ್: ಅಫ್ಗಾನಿಸ್ತಾನದಲ್ಲಿ ನಡೆದ ಕಾರ್ಯಾಚರಣೆಯ ಸಮಯದಲ್ಲಿ ನ್ಯಾಟೊ ಮಿತ್ರರಾಷ್ಟ್ರಗಳ ಪಡೆಗಳು ಮುಂಚೂಣಿಯಲ್ಲಿ ನಿಲ್ಲದೆ, ಹಿಂದೆ ಸರಿದಿದ್ದವು ಎಂದು ಹೇಳಿಕೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಡೆನ್ಮಾರ್ಕ್‌ ಪ್ರಧಾನಿ ಮೆಟ್ಟೆ ಫ್ರೆಡರಿಕ್ಸನ್‌ ಶನಿವಾರ ತರಾಟೆಗೆ ತೆಗೆದುಕೊಂಡರು.

‘ಟ್ರಂಪ್‌ ಆಡಿದ ಮಾತುಗಳು ಎಷ್ಟು ನೋವುಂಟು ಮಾಡಿದೆ ಎಂಬುದನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ ಎಂದು ಡೆನ್ಮಾರ್ಕ್‌ನ ಮಾಜಿ ಸೈನಿಕರು ಹೇಳಿದ್ದಾರೆ’ ಎಂದು ಅವರು ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಮಿತ್ರ ರಾಷ್ಟ್ರಗಳ ಸೈನಿಕರ ಬದ್ಧತೆಯನ್ನು ಅಮೆರಿಕದ ಅಧ್ಯಕ್ಷರು ಪ್ರಶ್ನಿಸುವುದನ್ನು ಒಪ್ಪಲಾಗದು’ ಎಂದು ಹೇಳಿದ್ದಾರೆ. ಡೆನ್ಮಾರ್ಕ್‌ನ ಮಾಜಿ ಸೈನಿಕರ ಸಂಸ್ಥೆ ಕೂಡಾ ಟ್ರಂಪ್‌ ಹೇಳಿಕೆಯನ್ನು ಖಂಡಿಸಿದೆ.

ADVERTISEMENT

‘ಡೆನ್ಮಾರ್ಕ್ ಯಾವಾಗಲೂ ಅಮೆರಿಕದ ಜತೆಗೆ ನಿಂತಿದೆ. ವಿಶ್ವದ ಯಾವುದೇ ಭಾಗದಲ್ಲಿ ಬಿಕ್ಕಟ್ಟು ತೋರಿದಾಗಲೂ ನಾವು ಅಮೆರಿಕದ ಸೈನಿಕರ ಜತೆ ಅಲ್ಲಿ ಕಾಣಿಸಿಕೊಂಡಿದ್ದೇವೆ’ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

ಟ್ರಂಪ್ ಅವರ ಹೇಳಿಕೆಯನ್ನು ಖಂಡಿಸಿ ಜನವರಿ 31ರಂದು ಕೋಪನ್‌ಹೇಗನ್‌ನಲ್ಲಿ ಮೌನ ಮೆರವಣಿಗೆ ನಡೆಸಲು ಡೆನ್ಮಾರ್ಕ್‌ನ ಮಾಜಿ ಸೈನಿಕರು ಕರೆ ನೀಡಿದ್ದಾರೆ.

‘ಅಫ್ಗಾನಿಸ್ತಾನದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ನ್ಯಾಟೊ ಪಡೆಗಳು ಯುದ್ಧ ಭೂಮಿಯಲ್ಲಿ ಸ್ವಲ್ಪ ಹಿಂದೆ ಉಳಿದುಕೊಂಡವು. ಅವುಗಳು ಮುಂಚೂಣಿಯಲ್ಲಿ ಇರಲಿಲ್ಲ’ ಎಂದು ‘ಫಾಕ್ಸ್‌ ನ್ಯೂಸ್‌’ಗೆ ಗುರುವಾರ ನೀಡಿದ ಸಂದರ್ಶನದಲ್ಲಿ ಟ್ರಂಪ್‌ ಹೇಳಿದ್ದರು.

ತಾಲಿಬಾನ್‌ ವಿರುದ್ಧದ ಹೋರಾಟದಲ್ಲಿ ತನ್ನ 457 ಸೈನಿಕರನ್ನು ಕಳೆದುಕೊಂಡ ಬ್ರಿಟನ್‌ ಕೂಡಾ ಟ್ರಂಪ್‌ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದೆ.