ಆಮೆರಿಕದಿಂದ ಗಡೀಪಾರಾಗಿ ಅಮೃತಸರಕ್ಕೆ ಬಂದಿಳಿದ ಭಾರತೀಯರೊಂದಿಗೆ ಪಂಜಾಬ್‌ನ ಅನಿವಾಸಿ ಭಾರತೀಯರ ವ್ಯವಹಾರಗಳ ಮಂತ್ರಿ ಕುಲದೀಪ್ ಸಿಂಗ್ ಧಾಲಿವಾಲ್ ಅವರು ಸಮಾಲೋಚನೆ ನಡೆಸಿದರು
ಪಿಟಿಐ ಚಿತ್ರ
ಟೆಕ್ಸಾಸ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಗಡೀಪಾರಾದವರಲ್ಲಿ 104 ಭಾರತೀಯರನ್ನು ಹೊತ್ತ ಅಮೆರಿಕ ಸೇನಾ ವಿಮಾನ ಸಿ–17 ಅಮೃತಸರಕ್ಕೆ ಬುಧವಾರ ಬಂದಿಳಿದಿದೆ.
ಹೀಗೆ ಬಂದವರ ಕೈಗೆ ಕೋಳ ಮತ್ತು ಕಾಲಿಗೆ ಸಂಕೋಲೆ ಹಾಕಲಾಗಿತ್ತು ಎಂದು ಅಮೆರಿಕದಿಂದ ಗಡೀಪಾರಾದವರು ನೊಂದು ಹೇಳಿದ್ದಾರೆ. ಇದರ ನಡುವೆಯೇ ಅಮೆರಿಕದ ಗಡಿ ಗಸ್ತು ಪಡೆಯ ಮುಖ್ಯಸ್ಥ ಮಿಷೆಲ್ ಡಬ್ಲೂ. ಬ್ಯಾಂಕ್ಸ್ ಅವರು ವಿಡಿಯೊ ಒಂದನ್ನು ಹಂಚಿಕೊಂಡಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗಡೀಪಾರಿಗೂ ಮೊದಲು ಕೈಗೆ ಕೋಳ ಹಾಗೂ ಕಾಲಿಗೆ ಸಂಕೋಲೆ ಹಾಕಿರುವ ವಿಡಿಯೊ ಹಂಚಿಕೊಂಡಿರುವ ಬ್ಯಾಂಕ್ಸ್, ‘ಅಕ್ರಮವಾಗಿ ನೆಲೆಸಿರುವ ಏಲಿಯನ್ಸ್‌ಗಳನ್ನು ಭಾರತಕ್ಕೆ ಯಶಸ್ವಿಯಾಗಿ ಗಡೀಪಾರು ಮಾಡಲಾಗಿದೆ. ಇವರನ್ನು ಹೊತ್ತ ಸೇನಾ ವಿಮಾನವು ಅತಿ ದೂರದ ದೇಶಕ್ಕೆ ಪ್ರಯಾಣಿಸಿದೆ. ವಲಸೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಾವು ಬದ್ಧರಾಗಿದ್ದೇವೆ. ದೇಶದ ಗಡಿಯನ್ನು ಅಕ್ರಮವಾಗಿ ದಾಟಿದೆ ಅವರನ್ನು ಹೊರಗೆ ಅಟ್ಟಲಾಗುವುದು’ ಎಂದಿದ್ದಾರೆ. ಇದಕ್ಕೆ ಸಬಂಧಿಸಿದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಮೆರಿಕದ ಸೇನಾ ವಿಮಾನ ಸಿ–17ರಲ್ಲಿ ಗಡೀಪಾರಾದ 104 ಭಾರತೀಯರನ್ನು ಅಮೃತಸರಕ್ಕೆ ತಂದು ಇಳಿಸಲಾಗಿದೆ. ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾದ ನಂತರ ಗಡೀಪಾರಾಗಿ ಭಾರತಕ್ಕೆ ಬಂದಿಳಿದ ಮೊದಲ ತಂಡ ಇದಾಗಿದೆ. ಟೆಕ್ಸಾಸ್‌ನ ಸ್ಯಾನ್ ಆ್ಯಂಟೊನಿಯೊದಿಂದ ಹೊರಟ ವಿಮಾನವು, ಅಮೃತಸರದ ಗುರು ರಾಮದಾಸ್ ಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂದಿಳಿಯಿತು.
ಗಡೀಪಾರಾದ 104 ಜನರಲ್ಲಿ 30 ಜನ ಪಂಜಾಬ್‌ಗೆ ಸೇರಿದವರು. ತಲಾ 33 ಜನ ಹರಿಯಾಣ ಮತ್ತು ಗುಜರಾತ್‌ಗೆ ಸೇರಿದವರಾಗಿದ್ದಾರೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದವರು ತಲಾ ಮೂವರು ಹಾಗೂ ಚಂಡೀಗಢಕ್ಕೆ ಸೇರಿದವರು ಇಬ್ಬರು ಇದ್ದರು.
ಸಮರ್ಪಕ ದಾಖಲೆ ಇಲ್ಲದೆ ಅಥವಾ ಅವಧಿ ಮೀರಿ ಅಮೆರಿಕದಲ್ಲಿ ನೆಲೆಸಿ, ಗಡೀಪಾರಾದವರಿಗೆ ಭಾರತ ಸರ್ಕಾರವು ಸೂಕ್ತ ಅನುಕೂಲ ಮಾಡಿಕೊಡಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.