ADVERTISEMENT

ನಾಸ್ತಿಕರ ಮೇಲಿನ ಕಿರುಕುಳ, ತಾರತಮ್ಯ ವಿಶ್ವದೆಲ್ಲೆಡೆ ಹೆಚ್ಚಳ

ಎಚ್ಚರಿಕೆ ಗಂಟೆ ಎಂದ ಐಎಚ್‌ಇಯು ವರದಿ

ಏಜೆನ್ಸೀಸ್
Published 3 ನವೆಂಬರ್ 2018, 4:36 IST
Last Updated 3 ನವೆಂಬರ್ 2018, 4:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ಧರ್ಮವನ್ನು ತೊರೆಯುವ, ಧರ್ಮ–ದೇವರನ್ನು ಟೀಕಿಸುವವರ ಮತ್ತು ನಾಸ್ತಿಕರ ಮೇಲಿನ ತಾರತಮ್ಯ ಹಾಗೂ ಕಿರುಕುಳ ವಿಶ್ವದೆಲ್ಲೆಡೆ ಕಳೆದ ವರ್ಷ ಹೆಚ್ಚಾಗಿದೆ. ಇದು ಎಚ್ಚರಿಕೆಯ ಗಂಟೆ ಎಂದು ಅಂತರರಾಷ್ಟ್ರೀಯ ಮಾನವತಾವಾದ ಮತ್ತು ನೈತಿಕ ಒಕ್ಕೂಟವು(ಐಎಚ್‌ಇಯು) ಪ್ರಕಟಿಸಿರುವ ‘ಫ್ರೀಡಂ ಆಫ್‌ ಥಾಟ್’ ಎಂಬ ವರದಿಯಲ್ಲಿ ಉಲ್ಲೇಖವಾಗಿದೆ.

ಕಳೆದ ವರ್ಷ ಅನೇಕ ರಾಷ್ಟ್ರಗಳಲ್ಲಿ ನಾಸ್ತಿಕರು ಬಹಳಷ್ಟು ಕಿರುಕುಳಕ್ಕೆ ಒಳಗಾಗಿದ್ದಾರೆ. ಕೆಲವರು ಮರಣದಂಡನೆಗೂ ಗುರಿಯಾಗಿದ್ದಾರೆ ಎಂದು ವರದಿ ಹೇಳಿದೆ. ಜತೆಗೆ ಮಾನವತಾವಾದಿಗಳು, ನಾಸ್ತಿಕರು ಮತ್ತು ಧರ್ಮವನ್ನು ನಂಬದವರ ಮೇಲಿನ ತಾರತಮ್ಯ, ಕಿರುಕುಳಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದೆ. ವರದಿಯನ್ನು ಬ್ರಿಟನ್‌ನ ಮಾನವತಾವಾದಿಗಳು ಸ್ವಾಗತಿಸಿದ್ದು, ನಾಸ್ತಿಕರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ ಎಂಬುದನ್ನು ವರದಿ ಸಾರಿ ಹೇಳಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೌದಿ ಅರೇಬಿಯಾ, ಇರಾನ್ ಮುಂಚೂಣಿಯಲ್ಲಿ

ADVERTISEMENT

ನಾಸ್ತಿಕರು ಅತಿ ಹೆಚ್ಚು ಶೋಷಣೆ ಎದುರಿಸುವ ಅಗ್ರ 10 ರಾಷ್ಟ್ರಗಳ ಹೆಸರನ್ನು ಇದೇ ಮೊದಲ ಬಾರಿ ಪಟ್ಟಿ ಮಾಡಲಾಗಿದೆ. ಇದರಲ್ಲಿ ಸೌದಿ ಅರೇಬಿಯಾ, ಇರಾನ್, ಅಫ್ಗಾನಿಸ್ತಾನ, ಮಾಲ್ಡೀವ್ಸ್ ಮತ್ತು ಪಾಕಿಸ್ತಾನ ಪ್ರಮುಖ ಐದರಲ್ಲಿವೆ. 13 ರಾಷ್ಟ್ರಗಳಲ್ಲಿ ಧರ್ಮನಿಂದನೆಗೆ ಮರಣದಂಡನೆವರೆಗೂ ಶಿಕ್ಷೆ ವಿಧಿಸಬಹುದಾಗಿದೆಯಂತೆ.

‘ನಾಸ್ತಿಕ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಜಗತ್ತಿನಾದ್ಯಂತ ಎದುರಿಸುತ್ತಿರುವ ತಾರತಮ್ಯದ ಕರಾಳ ಚಿತ್ರಣವನ್ನು ಈ ವರದಿ ಕಟ್ಟಿಕೊಟ್ಟಿದೆ. ರಾಷ್ಟ್ರೀಯತೆ ಬೆಳವಣಿಗೆ ಹೊಂದುತ್ತಿರುವ ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರನ್ನು ಟೀಕಿಸುವ ಧೈರ್ಯ ತೋರುವವರನ್ನು ‘ದೇಶವಿರೋಧಿ’ ಮತ್ತು ‘ವಿಧ್ವಸಂಕ’ ಎಂಬುದಾಗಿ ಬಿಂಬಿಸಲಾಗುತ್ತಿದೆ’ ಎಂದು ಐಎಚ್‌ಇಯು ಅಧ್ಯಕ್ಷ ಆ್ಯಂಡ್ರ್ಯೂ ಕಾಪ್ಸನ್ ಹೇಳಿದ್ದಾರೆ.

ಹೆಚ್ಚುತ್ತಿರುವ ತಾರತಮ್ಯದ ವಿರುದ್ಧ ಹೋರಾಡುವ ಸಲುವಾಗಿ ಬ್ರಿಟನ್ ಸರ್ಕಾರ ಮತ್ತು ಬ್ರಿಟನ್‌ನಲ್ಲಿರುವ ಇತರ ಸಂಘಟನೆಗಳ ಜತೆಗೂಡಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಬ್ರಿಟನ್‌ನ ಮಾನವತಾವಾದಿಗಳ ಒಕ್ಕೂಟದ ನೀತಿ ನಿರೂಪಕ ಮತ್ತು ಸಾರ್ವಜನಿಕ ವ್ಯವಹಾರಗಳನಿರ್ದೇಶಕ ರಿಚಿ ಥಾಂಪ್ಸನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.