ADVERTISEMENT

ಕೊರೊನಾ ಸೋಂಕಿತರನ್ನು ನಾಯಿಗಳು ಮೂಸಿ ಪತ್ತೆ ಹಚ್ಚಬಲ್ಲವು: ಅಧ್ಯಯನ

ಏಜೆನ್ಸೀಸ್
Published 25 ಜುಲೈ 2020, 7:25 IST
Last Updated 25 ಜುಲೈ 2020, 7:25 IST
ಜರ್ಮನ್ ಶೆಫರ್ಡ್ ನಾಯಿ. (ಪ್ರಾತಿನಿಧಿಕ ಚಿತ್ರ)
ಜರ್ಮನ್ ಶೆಫರ್ಡ್ ನಾಯಿ. (ಪ್ರಾತಿನಿಧಿಕ ಚಿತ್ರ)   

ಬರ್ಲಿನ್: ಕೆಲವೇದಿನಗಳ ತರಬೇತಿಯ ನಂತರ ನಾಯಿಗಳು ಕೊರೊನಾ ವೈರಸ್‌ ಸೋಂಕಿತರನ್ನು ಸುಲಭವಾಗಿ ಪತ್ತೆಹಚ್ಚಬಲ್ಲವು ಎಂದು ಜರ್ಮನಿಯ ಪಶುವೈದ್ಯಕೀಯ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ಹೇಳಿದೆ.

ಜರ್ಮನಿಯ ಸಶಸ್ತ್ರ ಪಡೆಗಳ ಎಂಟು ನಾಯಿಗಳಿಗೆ ಒಂದು ವಾರದ ತರಬೇತಿ ನೀಡಲಾಯಿತು. ತರಬೇತಿಯ ನಂತರ ಅವು ವೈರಸ್ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದವು. ನಾಯಿಗಳ ಪತ್ತೆಹಚ್ಚುವಿಕೆಯಲ್ಲಿ ಶೇ 94ರಷ್ಟು ಖಚಿತತೆ ಇತ್ತು. ಆರೋಗ್ಯವಂತರು ಮತ್ತು ಕೊರೊನಾ ಸೋಂಕಿತರಾಗಿದ್ದ1000 ಮಂದಿಯ ಜೊಲ್ಲನ್ನು ಈ ನಾಯಿಗಳು ಮೂಸಿ ನೋಡಿ, ಸೋಂಕಿತರನ್ನು ಗುರುತಿಸುವಲ್ಲಿ ಯಶಸ್ವಿಯಾದವು.

'ಈ ವಿಧಾನ ಖಂಡಿತ ಕೆಲಸ ಮಾಡಬಲ್ಲದು ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಸೋಂಕಿತ ರೋಗಿಯ ಚಯಾಪಚಯ (ಮೆಟಬಾಲಿಕ್) ಪ್ರಕ್ರಿಯೆ ಸಂಪೂರ್ಣ ಭಿನ್ನವಾಗಿರುತ್ತದೆ' ಎಂದು ಪ್ರಾಧ್ಯಾಪಕರಾದ ಮರೆನ್ ವೊನ್ ಹೇಳಿದ್ದಾರೆ. 'ಒಂದು ನಿರ್ದಿಷ್ಟ ಸ್ವರೂಪದ ವಾಸನೆಯನ್ನು ನಾಯಿಗಳು ಪತ್ತೆಹಚ್ಚಬಲ್ಲದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಮನುಷ್ಯರಿಗೆ ಹೋಲಿಸಿದರೆ ನಾಯಿಗಳಿಗೆ 1000 ಪಟ್ಟು ಹೆಚ್ಚು ವಾಸನೆ ಗ್ರಹಿಸುವ ಸಾಮರ್ಥ್ಯವಿದೆ. ಸೂಕ್ತತರಬೇತಿ ಪಡೆದ ನಾಯಿಗಳನ್ನು ವಿಮಾನ ನಿಲ್ದಾಣಗಳು, ಗಡಿ ಮತ್ತು ಕ್ರೀಡಾಕೂಟಗಳು ನಡೆಯುವ ಸ್ಥಳಗಳಲ್ಲಿ ನಿಯೋಜಿಸುವ ಮೂಲಕ ಸೋಂಕಿತರನ್ನು ಪತ್ತೆಹಚ್ಚಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಜರ್ಮನಿಯ ಸಶಸ್ತ್ರಪಡೆಗಳು, ಹ್ಯಾನೊವರ್ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಹ್ಯಾಂಬರ್ಗ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರಗಳು ಜಂಟಿಯಾಗಿ ಈ ಸಂಶೋಧನೆ ನಡೆಸಿದ್ದವು ಎಂದು ಬ್ಲೂಂಬರ್ಗ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.