ADVERTISEMENT

ಚೋಕ್ಸಿ ಅಕ್ರಮ ಪ್ರವೇಶ ಪ್ರಕರಣ ವಿಚಾರಣೆ ಜೂ. 25ಕ್ಕೆ ಮುಂದೂಡಿದ ಡೊಮಿನಿಕಾ ಕೋರ್ಟ್

ಪಿಟಿಐ
Published 15 ಜೂನ್ 2021, 1:56 IST
Last Updated 15 ಜೂನ್ 2021, 1:56 IST
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ   

ನವದೆಹಲಿ: ಅಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧದ ವಿಚಾರಣೆಯನ್ನು ಡೊಮಿನಿಕಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜೂನ್ 25ಕ್ಕೆ ಮುಂದೂಡಿಕೆ ಮಾಡಿದೆ.

ಪೂರ್ವನಿಗದಿಯಂತೆ ಸೋಮವಾರ ವಿಚಾರಣೆ ನಡೆಯಬೇಕಿತ್ತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಚೋಕ್ಸಿ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವ ಬಗ್ಗೆ ‘ಡೊಮಿನಿಕಾ ಚೀನಾ ಫ್ರೆಂಡ್‌ಶಿಪ್ ಹಾಸ್ಪಿಟಲ್‌’ನ ವೈದ್ಯರು ನೀಡಿರುವ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಸದ್ಯ ಚೋಕ್ಸಿ ಆಸ್ಪತ್ರೆಯಲ್ಲಿದ್ದು, ಪೊಲೀಸರ ಕಣ್ಗಾವಲಿನಲ್ಲಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸುಮಾರು ₹13,500 ಕೋಟಿ ವಂಚಿಸಿದ ಆರೋಪ ಹೊತ್ತಿರುವ ಚೋಕ್ಸಿ, ಆಂಟಿಗುವಾ, ಬಾರ್ಬುಡಾಗೆ ಪರಾರಿಯಾಗಿ 2018ರಲ್ಲಿ ಅಲ್ಲಿನ ಪೌರತ್ವ ಪಡೆದಿದ್ದರು. ಮೇ 23ರಂದು ಅಲ್ಲಿಂದ ತಪ್ಪಿಸಿಕೊಂಡು ಡೊಮಿನಿಕಾಗೆ ಅಕ್ರಮ ಪ್ರವೇಶ ಪಡೆದ ಕಾರಣ ಪೊಲೀಸರು ಬಂಧಿಸಿದ್ದರು. ಚೋಕ್ಸಿಯನ್ನು ಭಾರತಕ್ಕೆ ಕರೆ ತರಲು ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ.

ಈ ಮಧ್ಯೆ, ತಮ್ಮನ್ನು ಅಪಹರಿಸಲಾಗಿದೆ ಎಂದು ಚೋಕ್ಸಿ ಆರೋಪಿಸಿದ್ದರು. ಇದರಲ್ಲಿ ತನ್ನ ಪ್ರೇಯಸಿ ಬಾರ್ಬರಾ ಜರಾಬಿಕಾ ಪಾತ್ರವಿದೆ ಎಂದೂ ಹೇಳಿದ್ದರು. ಆದರೆ, ಈ ಆರೋಪವನ್ನು ಜರಾಬಿಕಾ ನಿರಾಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.