
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಹೆಚ್ಚುವರಿ ಪ್ರತಿಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ, ಅಮೆರಿಕಕ್ಕೆ ಆಮದಾಗುವ ಎಲ್ಲ ವಸ್ತುಗಳ ಮೇಲೆ ಮುಂದಿನ ಐದು ತಿಂಗಳವರೆಗೆ ಜಾಗತಿಕವಾಗಿ ಶೇ 10ರಷ್ಟು ಸುಂಕ ವಿಧಿಸಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ.
‘1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗುವುದು’ ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಎಲ್ಲ ದೇಶಗಳ ಮೇಲೆ 150 ದಿನಗಳವರೆಗೆ ಶೇ 15ರವರೆಗೆ ಸುಂಕ ವಿಧಿಸಲು ಈ ಕಾಯ್ದೆಯು ಅಧ್ಯಕ್ಷರಿಗೆ ಅವಕಾಶ ನೀಡುತ್ತದೆ. ನಮ್ಮ ಬಳಿ ಅತ್ಯುತ್ತಮ ಪರ್ಯಾಯ ಮಾರ್ಗಗಳಿವೆ. ಇವು ಹೆಚ್ಚಿನ ಹಣವನ್ನು ತರಬಹುದು. ಇದರಿಂದ ನಾವು ಇನ್ನಷ್ಟು ಬಲಿಷ್ಠರಾಗುತ್ತೇವೆ’ ಎಂದು ತಿಳಿಸಿದ್ದಾರೆ.
‘ಇತರ ದೇಶಗಳು ಮತ್ತು ಕಂಪನಿಗಳ ಅನ್ಯಾಯದ ವ್ಯಾಪಾರ ನೀತಿಗಳಿಂದ ನಮ್ಮ ದೇಶವನ್ನು ರಕ್ಷಿಸಲು, ನಮ್ಮ ಆಡಳಿತವು ಸೆಕ್ಷನ್ 301ರ ಅಡಿಯಲ್ಲಿ ತನಿಖೆ ನಡೆಸಲಿದೆ’ ಎಂದು ಹೇಳಿದ್ದಾರೆ.
‘ಸುಪ್ರೀಂ ಕೋರ್ಟ್ ತೀರ್ಪು ತೀವ್ರ ನಿರಾಸೆ ತಂದಿದೆ. ಅಲ್ಲದೆ, ವಿದೇಶಿ ಹಿತಾಸಕ್ತಿ ಗಳಿಂದ ಪ್ರಭಾವಿತವಾಗಿದೆ. ಕೋರ್ಟ್‌ನ ಕೆಲ ನ್ಯಾಯಮೂರ್ತಿಗಳ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ನಮ್ಮ ದೇಶಕ್ಕೆ ಯಾವುದು ಸರಿಯೋ ಅದನ್ನು ಮಾಡುವ ಧೈರ್ಯ ತೋರದಿದ್ದಕ್ಕಾಗಿ ಅವರ ಬಗ್ಗೆ ನಿಜಕ್ಕೂ ನಾಚಿಕೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಭಾರತ ಹಾಗೂ ಅಮೆರಿಕದ ಮಧ್ಯಂತರ ವ್ಯಾಪಾರ ಒಪ್ಪಂದ ಚಾಲ್ತಿಯಲ್ಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.