ADVERTISEMENT

ಚೀನಾದ ಕೆಲವು ವಿದ್ಯಾರ್ಥಿಗಳ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಿದ ಡೊನಾಲ್ಡ್ ಟ್ರಂಪ್

ಪಿಟಿಐ
Published 30 ಮೇ 2020, 6:06 IST
Last Updated 30 ಮೇ 2020, 6:06 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಜೊತೆ ನಂಟು ಹೊಂದಿರುವ ವಿದ್ಯಾರ್ಥಿಗಳು ಮತ್ತು ಸಂಶೋಧಕರ ಅಮೆರಿಕ ಪ್ರವೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧ ಹೇರಿದ್ದಾರೆ.

ಅಮೇರಿಕ-ಚೀನಾ ಮಧ್ಯೆ ಹೆಚ್ಚುತ್ತಿರುವ ವ್ಯಾಪಾರ ಸಂಘರ್ಷ, ಕೊರೊನಾ ವೈರಸ್ ಮೂಲಕ್ಕೆ ಸಂಬಂಧಿಸಿದ ವಾಗ್ವಾದ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ಸೇನಾ ಚಟುವಟಿಕೆಗಳು, ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಟ್ರಂಪ್ ಅವರು ಈ ಘೋಷಣೆ ಮಾಡಿದ್ದಾರೆ.

ಅಮೆರಿಕದ ಸೂಕ್ಷ್ಮ ತಂತ್ರಜ್ಞಾನಗಳು ಮತ್ತು ಬೌದ್ಧಿಕ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಪೀಪಲ್ಸ್ ಲಿಬರೇಷನ್ ಆರ್ಮಿ ಮೂಲಕ ಚೀನಾ ಹವಣಿಸುತ್ತಿದೆ ಎಂದು ಟ್ರಂಪ್ ದೂರಿದ್ದಾರೆ. ಚೀನಾದ ಈ ನಡೆಯು ಅಮೆರಿಕದ ದೀರ್ಘಕಾಲೀನ ಆರ್ಥಿಕತೆ ಮತ್ತು ಜನರ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಬೌದ್ಧಿಕ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಚೀನಾವು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಬಳಸಿಕೊಳ್ಳುತ್ತಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ ಜೊತೆ ನಂಟು ಹೊಂದಿರುವ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಚೀನಾದ ಅಧಿಕಾರಿಗಳಿಂದ ಶೋಷಣೆಗೆ ಒಳಗಾಗಿ ಅಥವಾ ಒತ್ತಡಕ್ಕೆ ಮಣಿದು ಅವರ ಕೃತ್ಯಗಳಿಗೆ ಸಹಕಾರ ನೀಡುವ ಅಪಾಯವಿದೆ ಎಂದು ಟ್ರಂಪ್ ಹೇಳಿದ್ದಾರೆ.

ಈ ಎಲ್ಲ ಕಾರಣಗಳಿಗಾಗಿ ಚೀನಾದ ಕೆಲವು ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಸಂಶೋಧನೆ ಮತ್ತು ಅಧ್ಯಯನದ ವೀಸಾದಡಿ ಅಮೆರಿಕಕ್ಕೆ ಬರಲು ಅನುಮತಿ ನಿರಾಕರಿಸಲಾಗುತ್ತದೆ. ಅಮೆರಿಕದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.