ಡೊನಾಲ್ಡ್ ಟ್ರಂಪ್
(ಪಿಟಿಐ ಚಿತ್ರ)
ನ್ಯೂಯಾರ್ಕ್: ಭಾರತದ ಮೇಲೆ ಹೆಚ್ಚುವರಿ ಸುಂಕ ಹೇರಿಕೆ ನೀತಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ. ಆದರೆ ಕಳೆದ ಹಲವಾರು ವರ್ಷಗಳಲ್ಲಿ ಬಾಂಧವ್ಯ ಏಕಪಕ್ಷೀಯವಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಮೆರಿಕದ ಮೇಲೆ ಭಾರತ ಅಧಿಕ ಸುಂಕವನ್ನು ಹೇರಿತ್ತು' ಎಂದು ಹೇಳಿದ್ದಾರೆ.
'ಭಾರತ ಅಮೆರಿಕದ ಮೇಲೆ ಅಧಿಕ ಸುಂಕ ವಿಧಿಸುತ್ತಿತ್ತು. ಅದು ಜಗತ್ತಿನಲ್ಲೇ ಅತ್ಯಧಿಕವಾಗಿತ್ತು. ಆದ್ದರಿಂದ ನಾವು ಭಾರತದೊಂದಿಗೆ ಹೆಚ್ಚು ವ್ಯಾಪಾರ ಮಾಡುತ್ತಿರಲಿಲ್ಲ. ಅದೇ ಹೊತ್ತಿಗೆ ನಾವು ಹೆಚ್ಚು ಸುಂಕ ವಿಧಿಸದಿದ್ದರಿಂದ ನಮ್ಮ ಜೊತೆ ಅವರು ಹೆಚ್ಚು ವ್ಯವಹಾರ ಮಾಡುತ್ತಿದ್ದರು' ಎಂದು ಹೇಳಿದ್ದಾರೆ.
'ಹಾಗಾಗಿ ದೊಡ್ಡ ಪ್ರಮಾಣದಲ್ಲಿ ನಮ್ಮ ದೇಶಕ್ಕೆ ವಸ್ತುಗಳನ್ನು ರವಾನಿಸುತ್ತಿದ್ದರು. ಆದರೆ ನಮ್ಮ ಮೇಲೆ ಶೇ 100ರಷ್ಟು ಸುಂಕ ಹೇರಿಕೆಯ ಕಾರಣ ನಮಗೆ ಏನನ್ನೂ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಅದು ಸರಿಯಲ್ಲ' ಎಂದು ಉಲ್ಲೇಖಿಸಿದ್ದಾರೆ.
ಇದಕ್ಕಾಗಿ ದ್ವಿಚಕ್ರ ವಾಹನ ಸಂಸ್ಥೆ ಹಾರ್ಲೆ ಡೇವಿಡ್ಸನ್ ಸಂಸ್ಥೆಯ ಉದಾಹರಣೆಯನ್ನು ಟ್ರಂಪ್ ನೀಡಿದ್ದಾರೆ. 'ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅದರ ಮೇಲೆ ಶೇ 200ರಷ್ಟು ಸುಂಕ ಹೇರಲಾಗಿತ್ತು. ಇದರಿಂದ ಏನಾಯಿತು? ಭಾರತಕ್ಕೆ ಹೋಗಿ ಹಾರ್ಲೆ ಡೇವಿಡ್ಸನ್ ಘಟಕ ತೆರೆಯಬೇಕಾಯಿತು' ಎಂದು ಹೇಳಿದ್ದಾರೆ.
'ಅದೇ ರೀತಿ ಈಗ ಸಾವಿರಾರು ಕಂಪನಿಗಳು ಅಮೆರಿಕಕ್ಕೆ ಬರುತ್ತಿವೆ. ಅದರಲ್ಲಿ ಕಾರು, ಎಐ ಸಂಸ್ಥೆಗಳು ಸೇರಿವೆ. ಚೀನಾ, ಮೆಕ್ಸಿಕೊ, ಕೆನಡಾದಿಂದಲೂ ಕಂಪನಿಗಳು ಬರುತ್ತಿವೆ. ಅವರೆಲ್ಲರೂ ಅಮೆರಿಕದಲ್ಲಿ ಉತ್ಪನ್ನಗಳನ್ನು ನಿರ್ಮಿಸಲು ಬಯಸುತ್ತಿದ್ದಾರೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.