ADVERTISEMENT

ಬಿಬಿಸಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಟ್ರಂಪ್‌

ಏಜೆನ್ಸೀಸ್
Published 16 ಡಿಸೆಂಬರ್ 2025, 14:40 IST
Last Updated 16 ಡಿಸೆಂಬರ್ 2025, 14:40 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ತಮ್ಮ ಭಾಷಣವನ್ನು ತಪ್ಪಾಗಿ ಅರ್ಥೈಸುವಂತೆ ವಿಡಿಯೊ ಎಡಿಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ವಿರುದ್ಧ 10 ಶತಕೋಟಿ ಡಾಲರ್‌ (90,912 ಕೋಟಿಗೂ ಅಧಿಕ) ಪರಿಹಾರ ಕೋರಿ ಮೊಕದ್ದಮೆಯನ್ನು ಫ್ಲಾರಿಡಾದಲ್ಲಿ ಹೂಡಿದ್ದಾರೆ.

‘2021ರ ಜನವರಿ 6ರಂದು ತಮ್ಮ ಭಾಷಣವನ್ನು ಬಿಬಿಸಿ ತಪ್ಪಾಗಿ ಎಡಿಟ್‌ ಮಾಡಿತ್ತು. ಇದು ಕ್ಯಾಪಿಟಲ್‌ ಗಲಭೆಗೆ ಕುಮ್ಮಕ್ಕು ನೀಡಿತ್ತು’ ಎಂದು ಅವರು ಆರೋಪಿಸಿದ್ದಾರೆ.  

ಮೊಕದ್ದಮೆ ಸಂಬಂಧ ಅವರು ಸಲ್ಲಿಸಿರುವ 33 ಪುಟಗಳಲ್ಲಿ ಬಿಬಿಸಿಯು ಸುಳ್ಳು, ಮಾನಹಾನಿ, ಮೋಸ, ಅವಹೇಳನಗೊಳಿಸುವ, ಪ್ರಚೋದಿಸುವ ಮತ್ತು ದುರುದ್ದೇಶಪೂರಿತ ಚಿತ್ರಣವನ್ನು ಪ್ರಸಾರ ಮಾಡಿದೆ ಎಂದು ದೂರಿದ್ದಾರೆ. ಇದು 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಪ್ರಭಾವ ಬೀರುವ ಯತ್ನವಾಗಿದೆ ಎಂದೂ ಅವರು ಹೇಳಿದ್ದಾರೆ. ಈ ಕುರಿತು ಬಿಬಿಸಿ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. 

ADVERTISEMENT

ಈ ಸಂಬಂಧ ಬಿಬಿಸಿ ಈಗಾಗಲೇ ಟ್ರಂಪ್ ಅವರಲ್ಲಿ ಕ್ಷಮೆಯಾಚಿಸಿದೆ. ಆದರೆ, ವಿಡಿಯೊದಿಂದ ಆಗಿರುವ ಹಾನಿಗೆ ಪರಿಹಾರ ನೀಡುವುದಿಲ್ಲ ಎಂದೂ ಹೇಳಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಬಿಬಿಸಿ ಮುಖ್ಯಸ್ಥರಿಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಆಗ ಪ್ರತಿಕ್ರಿಯಿಸಿದ್ದ ಟ್ರಂಪ್‌, ‘ಅವರು ಮೋಸ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲಿಯೇ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಇತ್ತೀಚೆಗೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.