ADVERTISEMENT

ನೊಬೆಲ್: ಈಡೇರದ ಒತ್ತಾಸೆ– ಟ್ರಂಪ್‌ಗೆ ನಿರಾಸೆ

ಏಜೆನ್ಸೀಸ್
Published 10 ಅಕ್ಟೋಬರ್ 2025, 13:05 IST
Last Updated 10 ಅಕ್ಟೋಬರ್ 2025, 13:05 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ‘ಈ ಬಾರಿಯ ನೊಬೆಲ್‌ ಶಾಂತಿ ಪ್ರಶಸ್ತಿ ತಮ್ಮನ್ನು ಆಯ್ಕೆ ಮಾಡಬೇಕು, ಹಲವಾರು ಯುದ್ಧಗಳನ್ನು ನಿಲ್ಲಿಸಿದ್ದರಿಂದ ನಾನು ಈ ಪ್ರಶಸ್ತಿಗೆ ಅರ್ಹ’ ಎಂದೇ ಹೇಳುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಒತ್ತಾಸೆ ಶುಕ್ರವಾರ ಈಡೇರಲಿಲ್ಲ

ವೆನಿಜುವೆಲಾದ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೊ ಅವರನ್ನು ನೊಬೆಲ್‌ ಶಾಂತಿ ಪ್ರಶಸ್ತಿ ಆಯ್ಕೆ ಮಾಡಿದ್ದಾಗಿ ನೊಬೆಲ್‌ ಸಮಿತಿ ಒಸ್ಲೊದಲ್ಲಿ  ಘೋಷಣೆ ಮಾಡಿತು. ಹೀಗಾಗಿ, ಟ್ರಂಪ್‌ ಅವರ ಆಸೆ ಈಡೇರಲಿಲ್ಲ.

ಈ ಪ್ರಶಸ್ತಿಯನ್ನು ಟ್ರಂಪ್‌ ಅವರಿಗೆ ನೀಡಬೇಕು ಎಂದು ರಿಪಬ್ಲಿಕನ್‌ ಪಕ್ಷದ ನಾಯಕರು ಕೂಡ ಒತ್ತಾಯಿಸುತ್ತಾ ಬಂದಿದ್ದರು. ‘ಆಪರೇಷನ್‌ ಸಿಂಧೂರ ವೇಳೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಾನು ನಿಲ್ಲಿಸಿದ್ದೆ’ ಎಂದು ಹಲವು ಬಾರಿ ಟ್ರಂಪ್‌ ಹೇಳಿಕೊಂಡಿದ್ದರು.

ADVERTISEMENT

ಟ್ರಂಪ್‌ ಈಗ ಎರಡನೇ ಬಾರಿಗೆ ಅಧ್ಯಕ್ಷ ಗಾದಿ ಏರಿದ್ದಾರೆ. ಕಳೆದ ಬಾರಿಯಂತೆ ಈ ಸಲವೂ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಮಗೇ ನೀಡಬೇಕು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

ನೊಬೆಲ್ ಸಮಿತಿಯು ತಮ್ಮನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಬಗ್ಗೆ ಟ್ರಂಪ್‌ ಸಂಶಯವನ್ನೂ ವ್ಯಕ್ತಪಡಿಸಿದ್ದರು. ‘ಅವರು ಏನು ಮಾಡಬೇಕೋ ಅದನ್ನೇ ಮಾಡಬೇಕಾಗುತ್ತದೆ. ಅವರು ಏನೇ ನಿರ್ಧಾರ ಕೈಗೊಂಡರೂ ಒಳ್ಳೆಯದು. ಈ ಪ್ರಶಸ್ತಿಗಾಗಿಯೇ ನಾನು ಈ ಕಾರ್ಯ (ಅವರೇ ಹೇಳಿಕೊಂಡಂತೆ, ಹಲವು ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದು) ಮಾಡಲಿಲ್ಲ. ಜನರ ಪ್ರಾಣ ಉಳಿಸುವುದಕ್ಕಾಗಿ ನಾನು ಯುದ್ಧಗಳನ್ನು ನಿಲ್ಲಿಸಿದೆ’ ಎಂದು ಗುರುವಾರವಷ್ಟೆ ಹೇಳಿದ್ದರು.

ನೊಬೆಲ್‌ ಸಮಿತಿಗೆ ಶಾಂತಿ ಸ್ಥಾಪನೆಗಿಂತ ರಾಜಕೀಯವೇ ಮುಖ್ಯವಾಗಿರುವುದು ಸಾಬೀತಾಗಿದೆ. ಆದಾಗ್ಯೂ ಡೊನಾಲ್ಡ್‌ ಟ್ರಂಪ್‌ ಅವರು ಯುದ್ಧಗಳನ್ನು ನಿಲ್ಲಿಸುವುದು ಜನರ ಪ್ರಾಣ ಉಳಿಸುವುದನ್ನು ಮುಂದುವರಿಸುವರು..
ಸ್ಟೀವನ್ ಚೆವುಂಗ್ ಶ್ವೇತಭವನ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.