
ಡೊನಾಲ್ಡ್ ಟ್ರಂಪ್ ಅವರನ್ನು ಜೊಹ್ರಾನ್ ಮಮ್ದಾನಿ ಅವರು ಶುಕ್ರವಾರ ಶ್ವೇತ ಭವನದಲ್ಲಿ ಭೇಟಿಯಾದರು –ಎಎಫ್‌ಪಿ ಚಿತ್ರ
ನ್ಯೂಯಾರ್ಕ್/ವಾಷಿಂಗ್ಟನ್ (ಪಿಟಿಐ): ನ್ಯೂಯಾರ್ಕ್‌ನ ಮೇಯರ್ ಆಗಿ ಆಯ್ಕೆಯಾಗಿರುವ ಜೊಹ್ರಾನ್ ಮಮ್ದಾನಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಇದೇ ಮೊದಲ ಬಾರಿಗೆ ಶ್ವೇತ ಭವನದಲ್ಲಿ ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದರು.
‘ಸಭೆ ಅತ್ಯುತ್ತಮವಾಗಿತ್ತು. ಇವರು ಖಂಡಿತವಾಗಿಯೂ ಉತ್ತಮ ಕೆಲಸಗಳನ್ನು ಮಾಡಬಲ್ಲರು’ ಎಂದು ಮಮ್ದಾನಿ ಅವರನ್ನು ಟ್ರಂಪ್ ಮುಕ್ತಕಂಠದಿಂದ ಹೊಗಳಿದರು.
ಕೆಲವೇ ತಿಂಗಳ ಹಿಂದೆ, ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಅವರು ಮಮ್ದಾನಿ ಅವರನ್ನು ವೈಯಕ್ತಿಕವಾಗಿ ನಿಂದಿಸಿದ್ದರು. ಇದಕ್ಕೆ ಪ್ರತಿಯಾಗಿ ಮಮ್ದಾನಿ ಅವರು ಟ್ರಂಪ್ ವಿರುದ್ಧ ಹಲವು ಆರೋಪಗಳನ್ನೂ ಮಾಡಿದ್ದರು. ಈ ಕಾರಣದಿಂದಲೇ ನ್ಯೂಯಾರ್ಕ್ ಮೇಯರ್ ಚುನಾವಣೆಯು ಜಗತ್ತಿನ ಗಮನ ಸೆಳೆದಿತ್ತು.
‘ಯುದ್ಧ ನಿಲ್ಲಿಸಿದ್ದು ನಾನೇ’: ಮಮ್ದಾನಿ ಅವರೊಂದಿಗೆ ನಡೆದ ಸಭೆಯಲ್ಲಿ ಟ್ರಂಪ್ ಅವರು ಭಾರತ–ಪಾಕಿಸ್ತಾನದ ಮಧ್ಯೆ ನಡೆದ ಸಂಘರ್ಷವನ್ನು ಪ್ರಸ್ತಾಪಿಸಿದರು. ‘ಯುದ್ಧ ನಿಲ್ಲಿಸಿದ್ದು ನಾನೇ’ ಎಂದು ಪುನರುಚ್ಚರಿಸಿದರು.
ಮಾತುಕತೆ ಉತ್ತಮವಾಗಿತ್ತು. ನ್ಯೂಯಾರ್ಕ್ ಜನರ ದೈನಂದಿನ ಬದುಕನ್ನು ಕೈಗೆಟುಕುವ ಹಾಗೆ ಮಾಡಲು ಅಧ್ಯಕ್ಷರೊಂದಿಗೆ ಸೇರಿ ಕೆಲಸ ಮಾಡುತ್ತೇನೆ.ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆಯಾಗಿರುವವರು
ಅಪರಾಧ ಇರಬಾರದು, ಮನೆ ನಿರ್ಮಿಸಬೇಕು ಬಾಡಿಗೆ ತಗ್ಗಬೇಕು– ಮಮ್ದಾನಿ ಅವರ ಈ ಅಭಿಲಾಶೆ ನನ್ನದೂ ಕೂಡ. ನಾನು ಅವರಿಗೆ ನೋವು ಮಾಡುವುದಿಲ್ಲ ಸಹಕಾರ ನೀಡುತ್ತೇನೆ.ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
ಪ್ರಚಾರದ ವೇಳೆ ಟ್ರಂಪ್ ಹೇಳಿದ್ದು...
* ಮಮ್ದಾನಿ ಮೇಯರ್ ಆಗಿ ಆಯ್ಕೆಯಾದರೆ ನಗರವು ಆರ್ಥಿಕವಾಗಿ ಸಾಮಾಜಿಕವಾಗಿ ವಿಪತ್ತಿಗೆ ಒಳಗಾಗಲಿದೆ. ನಾನು ನ್ಯೂಯಾರ್ಕ್‌ಗೆ ಯಾವುದೇ ಅನುದಾನ ನೀಡುವುದಿಲ್ಲ
* ವಲಸಿಗರ ರಕ್ಷಣೆಗೆ ಮಮ್ದಾನಿ ಅವರೇನಾದರೂ ಮುಂದಾದರೆ ಅವರನ್ನು ಬಂಧಿಸುತ್ತೇನೆ. ಆತನೊಬ್ಬ ಕಮ್ಯುನಿಸ್ಟ್
* ಮಮ್ದಾನಿ ಆಯ್ಕೆಯಾದರೆ 9/11 ಮತ್ತೊಮ್ಮೆ ಮರುಕಳಿಸುತ್ತದೆ. ಈತ ಒಬ್ಬ ಜಿಹಾದಿ (ರಿಪಬ್ಲಿಕನ್ ಪಕ್ಷದ ನಾಯಕರೊಬ್ಬರು ಆಡಿದ್ದ ಮಾತಿನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ...)
ಭೇಟಿ ಬಳಿಕ ಟ್ರಂಪ್ ಹೇಳಿದ್ದು...
* ನ್ಯೂರ್ಯಾಕ್‌ನಲ್ಲಿ ನಾನು ಬಹಳ ಆರಾಮವಾಗಿ ಇರಲಿದ್ದೇನೆ. ನಾನು ಅಂದುಕೊಂಡದ್ದಕ್ಕಿಂತ ಹೆಚ್ಚಿನ ವಿಚಾರಗಳಲ್ಲಿ ನಮ್ಮ ಮಧ್ಯೆ ಒಮ್ಮತ ಮೂಡಿದೆ
* ಯಾವುದೇ ಸಾಮಾನ್ಯ ಹುಡುಗನಿಗಿಂತ ಮಮ್ದಾನಿ ಅವರದ್ದು ವಿಭಿನ್ನ ವ್ಯಕ್ತಿತ್ವ. ಈತ ಮೇಯರ್ ಆಗಿ ಆಯ್ಕೆ ಆಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಮೇಯರ್‌ವರೆಗಿನ ಈತನ ಪ್ರಯಾಣ ಚೆನ್ನಾಗಿದೆ
* ನ್ಯೂಯಾರ್ಕ್ ನಗರವನ್ನು ಮತ್ತೊಮ್ಮೆ ಗ್ರೇಟ್ ಮಾಡಬೇಕು ಎಂದು ಈತ ಬಯಸುತ್ತಿದ್ದಾನೆ. ನಾನು ಇವನಿಗೆ ಉತ್ಸಾಹ ತುಂಬುವ ವ್ಯಕ್ತಿಯಾಗಿ ಸಹಕಾರ ನೀಡುತ್ತೇನೆ
ಫ್ಯಾಸಿಸ್ಟ್ ಹೇಳಿಕೆ: ಹೌದು ಎಂದೇ ಉತ್ತರಿಸಿ- ಟ್ರಂಪ್
‘ಟ್ರಂಪ್ ಅವರನ್ನು ಒಬ್ಬ ಫ್ಯಾಸಿಸ್ಟ್ ನಿರಂಕುಶವಾದಿ ಎಂದೆಲ್ಲಾ ಕರೆದಿದ್ದೀರಲ್ಲಾ. ಈ ಹೇಳಿಕೆಗೆ ನೀವು ಈಗಲೂ ಬದ್ಧರಾಗಿದ್ದೀರಾ’ ಎಂದು ಪತ್ರಕರ್ತರು ಮಮ್ದಾನಿ ಅವರನ್ನು ಪ್ರಶ್ನಿಸಿದರು. ಅವರು ಇನ್ನೇನು ಉತ್ತರಿಸಬೇಕು ಎನುವಷ್ಟರಲ್ಲಿ ಟ್ರಂಪ್ ಮಧ್ಯೆ ಮಾತನಾಡಿ ‘ಪರವಾಗಿಲ್ಲ. ಹೌದು ಎಂದೇ ಉತ್ತರಿಸಿ’ ಎಂದರು. ‘ನಾವು ಒಟ್ಟಿಗೆ ಕೆಲಸ ಮಾಡಿದಂತೆ ಅವರ ಅಭಿಪ್ರಾಯವೂ ಬದಲಾಗುತ್ತದೆ. ಆತ ನನಗೆ ಹಾಗೆಲ್ಲ ಕರೆದಿದ್ದು ನನಗೆ ಅವಮಾನವೇನೂ ಆಗಿಲ್ಲ’ ಎಂದೂ ಟ್ರಂಪ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.