ADVERTISEMENT

ಅಮೆರಿಕಕ್ಕೆ ವಲಸೆ; 60 ದಿನಗಳ ತಡೆ ಆದೇಶ ಸಹಿ ಮಾಡಿದ ಟ್ರಂಪ್ 

ಏಜೆನ್ಸೀಸ್
Published 23 ಏಪ್ರಿಲ್ 2020, 2:14 IST
Last Updated 23 ಏಪ್ರಿಲ್ 2020, 2:14 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌    

ವಾಷಿಂಗ್ಟನ್‌: ಅಮೆರಿಕನ್ನರ ಉದ್ಯೋಗ ರಕ್ಷಿಸುವ ಉದ್ದೇಶದಿಂದ ವಲಸೆ ಹಾಗೂ ಹೊಸದಾಗಿ ಗ್ರೀನ್‌ಕಾರ್ಡ್‌ ವಿತರಣೆಗೆ 60 ದಿನಗಳ ಅವಧಿಗೆ ತಡೆ ನೀಡುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಮಾಡಿದ್ದಾರೆ.

ಕೋವಿಡ್‌–19ನಿಂದಾಗಿ ಔದ್ಯೋಗಿಕ ವಲಯದಲ್ಲಿ ತಲ್ಲಣ ಉಂಟಾಗಿದೆ. ಉದ್ಯೋಗದ ಕಾರಣಗಳಿಂದಾಗಿ ಈಗಾಗಲೇ ಅರ್ಜಿ ಸಲ್ಲಿಸಿ ಕಾನೂನೂ ಬದ್ಧವಾಗಿ ಅಮೆರಿಕ ಪ್ರವೇಶಕ್ಕೆ ಕಾದಿರುವವರಿಗೆ ತಾತ್ಕಾಲಿಕ ವಲಸೆ ತಡೆ ಆದೇಶ ಅನ್ವಯವಾಗಲಿದೆ. ಈಗಾಗಲೇ ದೇಶದಲ್ಲಿ ವಾಸಿಸುತ್ತಿರುವವರಿಗೆ ಇದು ಅನ್ವಯಿಸದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

'ಇದೊಂದು ಅತ್ಯಂತ ಸಮರ್ಥ' ಆದೇಶ ಎಂದು ಬಣ್ಣಿಸಿಕೊಂಡಿರುವ ಡೊನಾಲ್ಡ್‌ ಟ್ರಂಪ್‌, 'ವಲಸೆಗೆ ತಡೆ ನೀಡುವುದರಿಂದ ಅಮೆರಿಕ ಕಾರ್ಯಾಚರಣೆಗಳನ್ನು ಪುನರಾರಂಭಿಸುತ್ತಿದ್ದಂತೆ ನಿರುದ್ಯೋಗಿ ಅಮೆರಿಕನ್ನರು ಮೊದಲ ಸಾಲಿನಲ್ಲಿರುತ್ತಾರೆ. ವೈರಸ್‌ ಬಿಕ್ಕಟ್ಟಿನಿಂದಾಗಿ ಕೆಲಸ ಕಳೆದುಕೊಂಡ ಅಮೆರಿಕನ್ನರ ಸ್ಥಾನಗಳಿಗೆ ವಿದೇಶಗಳಿಂದ ಹಾರಿ ಬಂದ ಹೊಸ ವಲಸಿಗ ಕಾರ್ಮಿಕರ ಆಯ್ಕೆ ಮಾಡುವುದು ಅಮೆರಿಕನ್ನರ ಪಾಲಿಗೆ ಅನ್ಯಾಯವಾಗಲಿದೆ' ಎಂದಿದ್ದಾರೆ.

ADVERTISEMENT

'ವಲಸೆ ವೀಸಾ ಹೊಂದಿರದ, ಅಮೆರಿಕದಿಂದ ಹೊರಗೆ ವಾಸಿಸುತ್ತಿರುವ ವಿದೇಶಿಯರಿಗೆ ಅನ್ವಯವಾಗುತ್ತದೆ' ಎಂದು ಶ್ವೇತ ಭವನ ಬಿಡುಗಡೆಮಾಡಿರುವ ಕಾರ್ಯಕಾರಿ ಆದೇಶದ ಪ್ರತಿಯಿಂದ ತಿಳಿದು ಬಂದಿದೆ.

ಸರ್ಕಾರದ ಆದೇಶ ಘೋಷಣೆಯಾಗಿರುವ ದಿನದ ನಂತರದಲ್ಲಿ ನೀಡಲಾದ ಅವಕಾಶ, ವೀಸಾ ಹೊರತುಪಡಿಸಿ ಪ್ರವಾಸದ ಕುರಿತು ಅಧಿಕೃತ ದಾಖಲೆ ಇಲ್ಲದಿರುವುದು ಅಥವಾ ಅಮೆರಿಕಕ್ಕೆ ಪ್ರಯಾಣಿಸಿ ಇಲ್ಲಿ ದಾಖಲಾತಿ ಅಥವಾ ಪ್ರವೇಶ ಪಡೆಯಲು ಸಜ್ಜಾಗಿರುವ ವಿದೇಶಿಯರಿಗೆ ಪ್ರಸ್ತುತ ಆದೇಶ ಅನ್ವಯವಾಗುತ್ತದೆ.

ಆರೋಗ್ಯ ಕಾರ್ಯಕರ್ತರು ಅಥವಾ ಹೂಡಿಕೆ ವರ್ಗದ ಅಡಿಯಲ್ಲಿ ಕಾನೂನು ಬದ್ಧವಾಗಿ ಅಮೆರಿಕದ ನಿವಾಸಿಯಾಗಲು ಬಯಸಿರುವವರಿಗೆ ಆದೇಶದಲ್ಲಿ ವಿನಾಯಿತಿ ನೀಡಲಾಗಿದೆ. ಹಾಗೇ ಗ್ರೀನ್‌ ಕಾರ್ಡ್‌ ಹೊಂದುವ ಮೂಲಕ ಈಗಾಗಲೇ ಅಮೆರಿಕದಲ್ಲಿ ವಾಸಿಸುತ್ತಿರುವ ವಿದೇಶಿಯರಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅಮೆರಿಕ ನಾಗರಿಕರ ಪತಿ ಅಥವಾ ಪತ್ನಿ, 21 ವರ್ಷ ಮತ್ತು ಚಿಕ್ಕ ವಯಸ್ಸಿನ ಮಕ್ಕಳಿಗೆ ಆದೇಶದಲ್ಲಿ ವಿನಾಯಿತಿ ನೀಡಲಾಗಿದೆ. ಉದ್ಯೋಗಗಳಿಗಿಂತ ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದರೆ ಅತ್ಯಧಿಕ ನಿರುದ್ಯೋಗ ಸಮಸ್ಯೆಯಿಂದ ಅಮೆರಿಕ ಆರ್ಥಿಕ ಚೇತರಿಕೆ ಕಾಣಲು ಸಮಸ್ಯೆಗಳು ಎದುರಾಗುತ್ತವೆ, ಹಾಗಾಗಿ ಈ ಕ್ರಮಗಳು ಮುಖ್ಯವಾಗಿವೆ ಎಂದು ಟ್ರಂಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.