ADVERTISEMENT

ಐತಿಹಾಸಿಕ ವೇಗದಲ್ಲಿ ಕೆಲಸ: ಬೆಂಬಲಿಗರು, ಅಮೆರಿಕ ಜನರಿಗೆ ಟ್ರಂಪ್‌ ಭರವಸೆ

ಅತ್ಯಂತ ಸುರಕ್ಷಿತ ಗಡಿ ಹೊಂದಲು ಪಣ

ಪಿಟಿಐ
Published 20 ಜನವರಿ 2025, 16:18 IST
Last Updated 20 ಜನವರಿ 2025, 16:18 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕ ಎದುರಿಸುತ್ತಿರುವ ಪ್ರತಿ ಬಿಕ್ಕಟ್ಟನ್ನು ಸರಿಪಡಿಸಲು ಐತಿಹಾಸಿಕ ವೇಗದಲ್ಲಿ ಕಾರ್ಯ ನಿರ್ವಹಿಸುವುದಾಗಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ (78) ಅವರು ದೇಶದ ಜನರು ಮತ್ತು ತನ್ನ ಬೆಂಬಲಿಗರಿಗೆ ಭರವಸೆ ನೀಡಿದರು.

ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ‘ಕ್ಯಾಪಿಟಲ್‌ ಒನ್‌ ಅರೇನಾ’ದಲ್ಲಿ ಅವರು  ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.

ಸಹಸ್ರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌, ಇದನ್ನು ‘ವಿಜಯದ ರ್‍ಯಾಲಿ’ ಎಂದು ಕರೆದರು.

ADVERTISEMENT

ಟ್ರಂಪ್‌ ಭಾಷಣದ ಪ್ರಮುಖಾಂಶಗಳು

* ನಾವು ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲೇ ಯಾರೂ ನಿರೀಕ್ಷಿಸಿದ ಫಲಿತಾಂಶಗಳನ್ನು ನೀವು ಗಮನಿಸುತ್ತಿದ್ದೀರಿ. ಇದನ್ನು ‘ಟ್ರಂಪ್‌ ಎಫೆಕ್ಟ್‌’ ಎಂದು ಎಲ್ಲರೂ ಕರೆಯುತ್ತಿದ್ದಾರೆ. ಆದರೆ ಇದೆಲ್ಲ ಆಗುತ್ತಿರುವುದು ನಿಮ್ಮಿಂದ.

* ಚುನಾವಣೆ ಬಳಿಕ ಷೇರು ಮಾರುಕಟ್ಟೆ ಏರುಗತಿಯಲ್ಲಿ ಸಾಗಿದೆ. ಸಣ್ಣ ವ್ಯಾಪಾರವೂ ಆಶಾದಾಯಕ ರೀತಿಯಲ್ಲಿ ಬೆಳವಣಿಗೆ ಹೊಂದಿದ್ದು, ದಾಖಲೆಯ 41 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದೆ. ಇದು 39 ವರ್ಷಗಳಲ್ಲಿಯೇ ಗರಿಷ್ಠ ಮಟ್ಟದ ಏರಿಕೆ.

* ಬಿಟ್‌ಕಾಯಿನ್‌ ಶರವೇಗದಲ್ಲಿ ಏರುತ್ತಿದ್ದು, ಹಲವು ದಾಖಲೆಗಳನ್ನು ಮುರಿದಿದೆ. ಪ್ರಮುಖ ಹೂಡಿಕೆ ಕಂಪನಿ ಡಿಎಂಎಸಿಸಿ ಪ್ರಾಪರ್ಟಿಸ್‌ ಅಮೆರಿಕದಲ್ಲಿ 20 ಶತಕೋಟಿ ಡಾಲರ್‌ನಿಂದ 40 ಶತಕೋಟಿ ಡಾಲರ್‌ನಷ್ಟು ಹೂಡಿಕೆ ಮಾಡುವುದಾಗಿ ಘೋಷಿಸಿದೆ. ನಾವು ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂಬ ಕಾರಣಕ್ಕೆ ಇಷ್ಟೆಲ್ಲ ಹೂಡಿಕೆಗಳು ಬರುತ್ತಿವೆ.

* ಆ್ಯಪಲ್‌ ಕಂಪನಿಯ ಸಿಇಒ ಟಿಮ್‌ ಕುಕ್‌ ಅವರ ಜತೆ ಮಾತುಕತೆ ನಡೆಸಲಾಗಿದೆ. ಅವರೂ ದೇಶದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡಲಿದ್ದಾರೆ.

* ಇದೆಲ್ಲ ಗಮನಿಸಿದರೆ ಜೋ ಬೈಡನ್‌ ಆಡಳಿತವು ನಾಲ್ಕು ವರ್ಷಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನದ್ದನ್ನು ನಾವು ಈಗಲೇ ಮಾಡಿದ್ದೇವೆ. ಶ್ವೇತಭವನದಲ್ಲಿ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಿದ್ದೇವೆ. ಅದನ್ನು ನೀವು ನೋಡಲಿದ್ದೀರಿ. ನಮ್ಮ ಕಾರ್ಯನಿರ್ವಾಹಕ ಆದೇಶಗಳು ನಿಮ್ಮನ್ನು ಹೆಚ್ಚು ಸಂತಸಪಡಿಸಲಿವೆ.

* ಲಕ್ಷಾಂತರ ಜನರು ನಮ್ಮ ದೇಶಕ್ಕೆ ಅಕ್ರಮವಾಗಿ, ಯಾವುದೇ ತಪಾಸಣೆಯಿಲ್ಲದೆ ಮುಕ್ತವಾಗಿ ಬಂದಿದ್ದಾರೆ. ಅವರಲ್ಲಿ ಹೆಚ್ಚಿನವರು ಕೊಲೆಗಾರರು ಎಂಬುದನ್ನು ಯೋಚಿಸಿ. ಇದಕ್ಕೆಲ್ಲ ನಾವು ಕಡಿವಾಣ ಹಾಕಲಿದ್ದೇವೆ. ನಮ್ಮ ಗಡಿಗಳ ಆಕ್ರಮಣವನ್ನು ಸ್ಥಗಿತಗೊಳಿಸುವ ಕಾರ್ಯ ಮಾಡಲಿದ್ದೇವೆ. ಅಕ್ರಮವಾಗಿ ಗಡಿ ಪ್ರವೇಶಿಸಿದವರು, ಅತಿಕ್ರಮಣಕಾರರು ಹಿಂದಿರುಗಲಿದ್ದಾರೆ. ಇದಕ್ಕಾಗಿ ಅತ್ಯಂತ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ.  ಈ ಮೂಲಕ ನಾವು ದೇಶದ ಇತಿಹಾಸದಲ್ಲಿಯೇ ಅತ್ಯಂತ ಸುರಕ್ಷಿತ ಗಡಿಯನ್ನು ಹೊಂದಲಿದ್ದೇವೆ.

ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸಬೇಕಿದೆ. ಇದಕ್ಕಾಗಿ ಶತಮಾನಗಳವರೆಗೆ ಶಾಶ್ವತವಾಗಿ ಇರುವಂತಹ ಬಲವಾದ ಅಡಿಪಾಯ ಹಾಕಲಾಗುವುದು.
– ಎಲಾನ್‌ ಮಸ್ಕ್‌, ಟೆಸ್ಲಾ ಕಂಪನಿ ಮಾಲೀಕ ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.