ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ದೇಶದ ಭದ್ರತಾ ನಿಯಮಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಪುನರ್‌ಪರಿಶೀಲನೆ ನಡೆಸಲಿದ್ದು, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ ಸೇರಿ ಹಲವು ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಈ ಬಗ್ಗೆ ಮಾಹಿತಿ ಇರುವ ಮೂವರು ತಿಳಿಸಿದ್ದಾರೆ.
ಈ ಪಟ್ಟಿಯಲ್ಲಿ ಬೇರೆ ದೇಶಗಳ ಹೆಸರೂ ಇದ್ದು, ಅವು ಯಾವುದೆಂದು ತಿಳಿದಿಲ್ಲ ಎಂದು ತಮ್ಮ ಹೆಸರನ್ನು ಬಹಿರಂಗಪಡಿಸಕೂಡದು ಎನ್ನುವ ಷರತ್ತಿನೊಂದಿಗೆ ಆವರು ಮಾಹಿತಿ ನೀಡಿದ್ದಾರೆ.
ಟ್ರಂಪ್ ಅವರು ತಮ್ಮ ಹಿಂದಿನ ಆಡಳಿತಾವಧಿಯಲ್ಲಿ 7 ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶ ನೀಷೇಧ ಹೇರಿದ್ದರು. ಇದನ್ನು 2021ರಲ್ಲಿ ಜೋ ಬೈಡನ್ ಅವರು ಹಿಂಪಡೆದಿದ್ದರು. ಟ್ರಂಪ್ ಅವರ ಆ ನಿರ್ಧಾರ ‘ನಮ್ಮ ರಾಷ್ಟ್ರೀಯ ಆತ್ಮಸಾಕ್ಷಿಯ ಮೇಲಿರುವ ಕಳಂಕ’ ಎಂದು ಕಿಡಿಕಾರಿದ್ದರು.
ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ, ವಿಶೇಷ ವಲಸೆ ವಿಸಾ, ಹಾಗೂ ನಿರಾಶ್ರಿತರಾಗಿ ಅಮೆರಿಕದಲ್ಲಿ ಆಶ್ರಯ ಪಡೆದಿರುವ ಸಾವಿರಾರು ಅಘ್ಗನ್ ಮೂಲದವರಿಗೆ ಸಮಸ್ಯೆಯಾಗಲಿದೆ.
‘ಸಂಪೂರ್ಣ ನಿಷೇಧ ಹೇರುವ ಪಟ್ಟಿಯಲ್ಲಿ ಅಫ್ಗಾನಿಸ್ತಾನದ ಹೆಸರು ಇದ್ದು, ಪಾಕಿಸ್ತಾನ ಹೆಸರನ್ನೂ ಶಿಫಾರಸು ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಈ ನಿಯಮವನ್ನು ಜಾರಿ ಮಾಡುವ ನ್ಯಾಯ ಮತ್ತು ಹೋಂ ಲ್ಯಾಂಡ್ ಭದ್ರತೆ, ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯನ್ನು ಈ ಬಗ್ಗೆ ಮಾಹಿತಿ ಬಯಸಿ ಸಂಪರ್ಕಿಸಲಾಯಿತಾದರೂ, ಅವರಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.
ಅಮೆರಿಕದಲ್ಲಿ ನಿರಾಶ್ರಿತರಾಗಿ ಆಶ್ರಯ ಪಡೆದಿರುವ ಹಾಗೂ ವಿಶೇಷ ವಿಸಾದಲ್ಲಿ ಇರುವ ಅಫ್ಗನ್ನರನ್ನು ತೀವ್ರವಾಗಿ ತಪಾಸಣೆ ನಡೆಸಲಾಗುವುದು. ಇದು ಅಮೆರಿಕದಲ್ಲಿ ಸ್ಥಳಾಂತರಗೊಳ್ಳಲು ಕಾಯುತ್ತಿರುವ ಅಫ್ಗನ್ನರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬರದಿದ್ದರೂ, ಪ್ರಯಾಣ ನಿಷೇಧದ ಆದೇಶ ಮುಂದಿನ ವಾರ ಹೊರಬೀಳಲಿದೆ ಎಂದು ಅಮೆರಿಕ ಸರ್ಕಾರದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.