ADVERTISEMENT

ಭಾರತ–ಅಮೆರಿಕ ಭವಿಷ್ಯದ ನಡೆ ಬಗ್ಗೆ ಚರ್ಚೆ

ಪಾಂಪಿಯೊ, ಮ್ಯಾಟಿಸ್ ಭೇಟಿಯಾದ ಡೊಭಾಲ್

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 13:37 IST
Last Updated 15 ಸೆಪ್ಟೆಂಬರ್ 2018, 13:37 IST
ಡೊಭಾಲ್
ಡೊಭಾಲ್   

ವಾಷಿಂಗ್ಟನ್ (ಪಿಟಿಐ): ಭಾರತ ಹಾಗೂ ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಭವಿಷ್ಯದ ಹೆಜ್ಜೆಗಳು ಹೇಗಿರಬೇಕು ಎಂಬ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಕೇಂದ್ರ ಸರ್ಕಾರದ ಭದ್ರತಾ ಸಲಹೆಗಾರ ಅಜಿತ್ ಢೊಬಾಲ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹಾಗೂ ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಜೊತೆ ಈ ಸಂಬಂಧ ಸುಧೀರ್ಘ ಮಾತುಕತೆ ನಡೆಸಿದರು.

ಅಮೆರಿಕದ ನೂತನ ಭದ್ರತಾ ಸಲಹೆಗಾರ ಜಾನ್ ಬೋಲ್ಟರ್‌ ಅವರ ಜೊತೆ ಡೊಭಾಲ್ ಮೊದಲ ಬಾರಿ ಮಾತುಕತೆ ನಡೆಸಿದರು. ಅಮೆರಿಕದಲ್ಲಿರುವ ಭಾರತದ ರಾಯಭಾರಿ ನವತೇಜ್ ಸಿಂಗ್ ಸರ್ನಾ ಅವರೂ ಮಾತುಕತೆಯ ಭಾಗವಾಗಿದ್ದರು.

ADVERTISEMENT

ದೆಹಲಿಯಲ್ಲಿ ಭಾರತ–ಅಮೆರಿಕ ನಡುವೆ 2+2 ಸಭೆ ನಡೆದ ಒಂದು ವಾರದ ಬಳಿಕಟ್ರಂಪ್ ಸರ್ಕಾರದ ಮೂವರು ಪ್ರಮುಖ ಪ್ರತಿನಿಧಿಗಳ ಜೊತೆ ಡೊಭಾಲ್ ಸಮಾಲೋಚನೆ ನಡೆಸಿರುವುದು ಮಹತ್ವ ಪಡೆದಿದೆ. 2+2 ಸಭೆಯಲ್ಲೂ ಪಾಂಪಿಯೊ ಹಾಗೂ ಮ್ಯಾಟಿಸ್ ಜೊತೆ ಚರ್ಚೆ ನಡೆದಿತ್ತು.

‘2+2 ಸಭೆಯಲ್ಲಿ ಉಭಯ ದೇಶಗಳ ಮೈತ್ರಿಗೆ ಧನಾತ್ಮಕ ವೇಗ ಸಿಕ್ಕಿದೆ. ಕಳೆದ ವಾರ ಆರಂಭವಾದ ಈ ಪ್ರಕ್ರಿಯೆಯು ಡೊಭಾಲ್ ಅವರ ಭೇಟಿ ಮೂಲಕ ಮುಂದುವರಿದಿದೆ’ ಎಂದು ಅಮೆರಿಕ–ಭಾರತ ಕಾರ್ಯತಂತ್ರ ಮತ್ತು ಸಹಭಾಗಿತ್ವ ವೇದಿಕೆ (ಯುಎಸ್ಐಎಸ್‌ಪಿಎಫ್) ಅಭಿಪ್ರಾಯಪಟ್ಟಿದೆ.

ದೆಹಲಿಯಲ್ಲಿ ಕಳೆದ ವಾರ ನಡೆದ ಮೊದಲ 2+2 ಸಭೆಯಲ್ಲಿ ಸಚಿವರಾದ ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ಸಚಿವರಾದ ಮೈಕ್ ಪಾಂಪಿಯೊ, ಜೇಮ್ಸ್ ಮ್ಯಾಟಿಸ್ ಜೊತೆ ಮಾತುಕತೆ ನಡೆಸಿದ್ದರು. ಉಭಯ ದೇಶಗಳ ನಡುವಿನ ಮೈತ್ರಿಯನ್ನು ಇನ್ನಷ್ಟು ಬಲಗೊಳಿಸುವುದುಹೊಸ ವೇದಿಕೆಯ ರಾಜತಾಂತ್ರಿಕ ಕಾರ್ಯತಂತ್ರದ ಉದ್ದೇಶವಾಗಿತ್ತು.

ಅಮೆರಿಕ ಸೇನೆ ಬಳಸುವ ಸುಧಾರಿತ ತಂತ್ರಜ್ಞಾನದ ಸಂವಹನ ಸಾಧನಗಳು ಹಾಗೂ ಗುಪ್ತ ಸಂದೇಶಗಳನ್ನು ಭಾರತ ಬಳಸಿಕೊಳ್ಳಲು ಈ ಮಾತುಕತೆಯಲ್ಲಿ ಒಪ್ಪಂದ ಏರ್ಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.