ಘಟನಾ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು
–ರಾಯಿಟರ್ಸ್ ಚಿತ್ರ
ಬರ್ಲಿನ್: ಮಜರ್ಮನಿಯ ಮ್ಯಾಗ್ಡೆಬರ್ಗ್ ನಗರದ ಮಾರುಕಟ್ಟೆಯೊಂದಕ್ಕೆ ವ್ಯಕ್ತಿಯೊಬ್ಬ ಕಾರು ನುಗ್ಗಿಸಿದ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 100ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಾರು ಚಲಾಯಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
‘ಶುಕ್ರವಾರ ಸಂಜೆ ಜನರು ಕ್ರಿಸ್‌ಮಸ್ ಹಬ್ಬದ ಖರೀದಿಗೆ ಕಿಕ್ಕಿರಿದಿದ್ದ ಸಮಯದಲ್ಲಿ ಕಾರು ನುಗ್ಗಿಸಲಾಗಿದೆ. ಮೃತರಲ್ಲಿ ಒಬ್ಬ ಬಾಲಕನೂ ಸೇರಿದ್ದಾನೆ. ಗಾಯಗೊಂಡವರಲ್ಲಿ 41 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಆತಂಕವಿದೆ’ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಮೂಲದ 50 ವರ್ಷದ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದ ಹಿಂದಿನ ಉದ್ದೇಶ ಏನೆಂಬುದು ಸ್ಪಷ್ಟವಾಗಿಲ್ಲ. ಪೊಲೀಸರು ಆರೋಪಿಯ ಹೆಸರನ್ನು ಬಹಿರಂಗಪಡಿಸಿಲ್ಲವಾದರೂ, ಸ್ಥಳೀಯ ಮಾಧ್ಯಮಗಳು ಆತನನ್ನು ತಾಲಿಬ್ ಎ. ಎಂದು ಗುರುತಿಸಿದೆ. ಈತ 2006ರಿಂದಲೂ ಜರ್ಮನಿಯಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಎಂದು ವರದಿ ಮಾಡಿವೆ.
‘ಇದು ಉದ್ದೇಶಪೂರ್ವಕ ಕೃತ್ಯವಾಗಿದೆ. ದಾಳಿ ಹಿಂದಿನ ಉದ್ದೇಶ ತಿಳಿಯಲು ಅಧಿಕಾರಿಗಳು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ’ ಎಂದು ಮ್ಯಾಗ್ಡೆಬರ್ಗ್ ರಾಜಧಾನಿ ಸ್ಯಾಕ್ಸೋನಿ-ಅನ್ಹಾಲ್ಟ್‌ನ ಗವರ್ನರ್ ರೈನರ್ ಹ್ಯಾಸೆಲೋಫ್ ತಿಳಿಸಿದ್ದಾರೆ.
ಶಂಕಿತ ವ್ಯಕ್ತಿ ಕಾರನ್ನು ಬಾಡಿಗೆಗೆ ಪಡೆದು ನೇರವಾಗಿ ಮಾರುಕಟ್ಟೆಗೆ ತೆರಳಿದ್ದಾನೆ. ಕಾರಿನಲ್ಲಿ ಸ್ಫೋಟಕಗಳಿವೆಯೇ ಮತ್ತು ಚಾಲಕ ಏಕಾಂಗಿಯಾಗಿ ಕೃತ್ಯ ಎಸಗಿದ್ದಾನೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಈ ಘಟನೆಯು 2016ರಲ್ಲಿ ಬರ್ಲಿನ್ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯನ್ನು ನೆನಪಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಸಂಬಂಧ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್, ‘ನಾವು ಮ್ಯಾಗ್ಡೆಬರ್ಗ್‌ನ ಸಂತ್ರಸ್ತರು ಅವರ ಕುಟುಂಬದವ ಜೊತೆಗಿದ್ದೇವೆ. ಈ ಆತಂಕದ ಸಮಯದಲ್ಲಿ ತಕ್ಷಣ ಕಾರ್ಯಪ್ರವೃತ್ತ ರಕ್ಷಣಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.