ADVERTISEMENT

ಮಳೆ ಕೊರತೆ, ಬಿಸಿಲಿನ ಝಳ ಹೆಚ್ಚಿರುವ ಬ್ರಿಟನ್‌ನ ಹಲವೆಡೆ ಬರ ಪರಿಸ್ಥಿತಿ ಘೋಷಣೆ

ಏಜೆನ್ಸೀಸ್
Published 13 ಆಗಸ್ಟ್ 2022, 7:38 IST
Last Updated 13 ಆಗಸ್ಟ್ 2022, 7:38 IST
   

ಲಂಡನ್: ಬ್ರಿಟನ್‌ನ ಕೆಲ ಭಾಗಗಳಲ್ಲಿ ಮಳೆ ಕೊರತೆ ಮತ್ತು ತಾಪಮಾನದಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರವು ದಕ್ಷಿಣ, ಪೂರ್ವ ಮತ್ತು ಮಧ್ಯ ಇಂಗ್ಲೆಂಡ್‌ನ ಕೆಲವು ಭಾಗಗಳಲ್ಲಿ ಬರ ಪರಿಸ್ಥಿತಿ ಘೋಷಣೆ ಮಾಡಿದೆ.

‘50 ವರ್ಷಗಳಲ್ಲಿ ಕಡು ಬೇಸಿಗೆ’ ವಾತಾವರಣ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸೇರಿದ್ದ ರಾಷ್ಟ್ರೀಯ ಬರ ಸಮಿತಿ ಅಧಿಕಾರಿಗಳು ಮತ್ತು ತಜ್ಞರ ಸಮೂಹದ ಸಭೆ ಬಳಿಕ ಈ ಘೋಷಣೆ ಮಾಡಲಾಗಿದೆ ಎಂದು ಪರಿಸರ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಬ್ರಿಟನ್‌ನ ಕೆಲವು ಭಾಗಗಳಲ್ಲಿ ಇತ್ತೀಚೆಗೆ ದಾಖಲೆಯ ತಾಪಮಾನ ದಾಖಲಾಗಿತ್ತು. ಈ ನಡುವೆ, ದಕ್ಷಿಣ ಇಂಗ್ಲೆಂಡ್ ಮತ್ತು ವೇಲ್ಸ್‌ನ ಕೆಲವು ಭಾಗಗಳಿಗೆ ತೀವ್ರ ಶಾಖದ ಎಚ್ಚರಿಕೆಗಳನ್ನು ಸಹ ನೀಡಲಾಗಿದೆ.

‘ದೇಶದ ಕೆಲವು ಭಾಗಗಳಲ್ಲಿ ಜುಲೈನಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿತ್ತು. ಪ್ರಸ್ತುತ ನಾವು ಎರಡನೇ ಬಿಸಿ ಗಾಳಿಯ ಅಲೆಯನ್ನು ಅನುಭವಿಸುತ್ತಿದ್ದೇವೆ’ ಎಂದು ಬ್ರಿಟನ್‌ನ ಜಲ ಸಚಿವ ಸ್ಟೀವ್ ಡಬಲ್, ಬರದ ಸಭೆಯ ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT


2018ರ ಬಳಿಕ ದೇಶ ಭೀಕರ ಬರಕ್ಕೆ ತುತ್ತಾಗಿದ್ದು, ನೀರು ಸರಬರಾಜುದಾರರು ನೀರಿನ ಬಳಕೆ ಮೇಲೆ ಕಠಿಣ ಸಂರಕ್ಷಣಾ ಕ್ರಮಗಳನ್ನು ವಿಧಿಸಲು ಅನುವು ಮಾಡಿಕೊಟ್ಟಿದೆ. ಹಲವಾರು ನೀರಿನ ಸರಬರಾಜುದಾರರು ಅಂಗಳ ಮತ್ತು ಉದ್ಯಾನಗಳ ಬಳಕೆ ಹಾಗೂ ವಾಹನಗಳನ್ನು ತೊಳೆಯಲು ಪೈಪ್ ಮೂಲಕ ನೀರಿನ ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿವೆ.

ಹೆಚ್ಚುವರಿ ಕ್ರಮವಾಗಿ, ನದಿಗಳಿಂದ ಸಾಮಾನ್ಯಕ್ಕಿಂತ ಹೆಚ್ಚು ನೀರನ್ನು ತಿರುಗಿಸುವುದು ಮತ್ತು ಹೆಚ್ಚು ಕುಡಿಯುವ ನೀರನ್ನು ಉತ್ಪಾದಿಸಲು ಲಂಡನ್‌ನಂತಹ ನಗರಗಳಲ್ಲಿ ಸಮುದ್ರದ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ.

‘ನಾವು ಈ ಹಿಂದೆಯೂ ಬರವನ್ನು ಎದುರಿಸಿದ್ದೇವೆ. ಆದರೆ, ಈ ವರ್ಷ ಅತ್ಯಂತ ಕಡು ಬೇಸಿಗೆಯ ವಾತಾವರಣವಿದೆ’ ಎಂದು ಬ್ರಿಸ್ಟಲ್ ವಿಶ್ವವಿದ್ಯಾಲಯದ ಜಲವಿಜ್ಞಾನ ತಜ್ಞ ಡಾ. ಗೆಮ್ಮಾ ಕಾಕ್ಸನ್ ಹೇಳಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಹವಾಮಾನ ಬದಲಾವಣೆಯಾಗಿದೆ ಎಂದು ಅವರು ಹೇಳಿದ್ದಾರೆ. ಹೆಚ್ಚುತ್ತಿರುವ ಶುಷ್ಕ ಬೇಸಿಗೆಯು ಮುಂಬರುವ ದಿನಗಳಲ್ಲಿ ದಾಖಲೆಯ ಮಳೆಯೊಂದಿಗೆ ದೊಡ್ಡ ಪ್ರವಾಹದ ಅಪಾಯವನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ.

ಇಂಗ್ಲೆಂಡ್‌ನ ದಕ್ಷಿಣ ಭಾಗ ಮತ್ತು ವೇಲ್ಸ್‌ನ ಕೆಲವು ಭಾಗಗಳಿಗೆ ಭಾನುವಾರದವರೆಗೆ ತೀವ್ರ ಶಾಖದ ಎಚ್ಚರಿಕೆ ನೀಡಲಾಗಿದೆ ಎಂದು ಬ್ರಿಟನ್‌ನ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ತಾಪಮಾನವು ಪ್ರಯಾಣವನ್ನು ಅಡ್ಡಿಪಡಿಸುವುದು ಮಾತ್ರವಲ್ಲದೆ ಕೆಲವು ರೋಗಿಗಳಿಗೆ ಶಾಖ ಸಂಬಂಧಿತ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಒತ್ತಿ ಹೇಳಿದೆ.

ದಕ್ಷಿಣ ಇಂಗ್ಲೆಂಡ್‌ನಲ್ಲಿರುವ ವಿಗ್ಗೊನ್‌ಹೋಲ್ಟ್‌ನಲ್ಲಿ ಗುರುವಾರ ದೇಶದ ಅತ್ಯಧಿಕ ತಾಪಮಾನ 93.5 ಫ್ಯಾರನ್‌ಹೀಟ್‌ (34.2 ಸೆಲ್ಸಿಯಸ್) ದಾಖಲಾಗಿತ್ತು. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ, ದಕ್ಷಿಣ ಇಂಗ್ಲೆಂಡ್‌ನಲ್ಲಿ ತಾಪಮಾನವು 93.2 ಫ್ಯಾರನ್‌ಹೀಟ್ (34 ಸೆಲ್ಸಿಯಸ್) ತಲುಪಿತ್ತು. ಹವಾಮಾನಶಾಸ್ತ್ರಜ್ಞರ ಪ್ರಕಾರ, ವಾರಾಂತ್ಯದಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.