ADVERTISEMENT

ಮಾಜಿ ಪತ್ನಿಗೆ ₹5,473 ಕೋಟಿ ಜೀವನಾಂಶ: ದುಬೈ ದೊರೆಗೆ ಬ್ರಿಟನ್ ಕೋರ್ಟ್ ಆದೇಶ

ಪಿಟಿಐ
Published 21 ಡಿಸೆಂಬರ್ 2021, 16:04 IST
Last Updated 21 ಡಿಸೆಂಬರ್ 2021, 16:04 IST
ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕಟೌಮ್: ಎಎಫ್‌ಪಿ ಚಿತ್ರ
ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕಟೌಮ್: ಎಎಫ್‌ಪಿ ಚಿತ್ರ   

ಲಂಡನ್: ತಮ್ಮಮಾಜಿ ಪತ್ನಿ ಮತ್ತು ಮಕ್ಕಳಿಗೆ 550 ಮಿಲಿಯನ್ ಪೌಂಡ್ಸ್ (ಸುಮಾರು ₹5,473 ಕೋಟಿ) ಜೀವನಾಂಶ ಪಾವತಿಸುವಂತೆ ದುಬೈ ದೊರೆಗೆ ಬ್ರಿಟನ್ನಿನ ನ್ಯಾಯಾಲಯ ಆದೇಶಿಸಿದೆ. ಇದು ಬ್ರಿಟನ್ನಿನ ಅತ್ಯಂತ ದುಬಾರಿ ವಿಚ್ಛೇದನಾ ಎನ್ನಲಾಗಿದೆ.

ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕಟೌಮ್ ಅವರು ತಮ್ಮ ವಿಚ್ಛೇದಿತ 6ನೇ ಪತ್ನಿ ಹಯಾ ಬಿಂಟ್ ಅಲ್ ಹುಸೇನ್‌ ಅವರಿಗೆ 251.5 ಮಿಲಿಯನ್ ಪೌಂಡ್ ಮತ್ತು ಅವರ ಮಕ್ಕಳಾದ ಅಲ್ ಜಲೀಲಾ(14), ಮತ್ತು ಜಾಯೆದ್( 9) ಅವರಿಗೆ 290 ಮಿಲಿಯನ್ ಪೌಂಡ್‌ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಆದೇಶಿಸಲಾಗಿದೆ.

ಮಕ್ಕಳು ಎಷ್ಟು ಕಾಲ ಬದುಕುತ್ತಾರೆ ಮತ್ತು ಅವರು ತಮ್ಮ ತಂದೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆಯೇ ಎಂಬ ಅಂಶವನ್ನು ಅವಲಂಬಿಸಿ ಅವರು ಪಡೆಯುವ ಜೀವನಾಂಶದ ಒಟ್ಟು ಮೊತ್ತವು 290 ಮಿಲಿಯನ್ ಪೌಂಡ್‌ಗಳಿಗಿಂತ ಹೆಚ್ಚು ಅಥವಾ ಕಡಿಮೆ ಆಗಿರುತ್ತದೆ. ಮಕ್ಕಳು ಅಪ್ರಾಪ್ತರಾಗಿರುವಾಗ ಅವರ ಭದ್ರತಾ ವೆಚ್ಚಗಳನ್ನು ಭರಿಸಲು ವರ್ಷಕ್ಕೆ 11 ಮಿಲಿಯನ್ ಪೌಂಡ್‌ಗಳನ್ನೂ ಇದು ಒಳಗೊಂಡಿದೆ.

ಈ ಕುಟುಂಬಕ್ಕೆ ವಿಶಿಷ್ಟವಾದ ಕಠಿಣ ಭದ್ರತೆ ಅಗತ್ಯವಿದೆ. ಬೇರೆ ಯಾರಿಂದಲೂ ಅಲ್ಲ. ಅವರ ತಂದೆ ಶೇಖ್ ಮೊಹಮ್ಮದ್ ಅವರಿಂದಲೇ ಅವರಿಗೆ ಅಪಾಯ ಇದೆ ಎಂದು ನ್ಯಾಯಾಧೀಶ ಫಿಲಿಪ್ ಮೂರ್ ಹೇಳಿದ್ದಾರೆ.

ADVERTISEMENT

2019ರಲ್ಲಿ ಹಯಾ ಅವರು ಪತಿಯನ್ನು ತೊರೆದು ಬ್ರಿಟನ್‌ಗೆ ತೆರಳಿದ್ದರು. ಬ್ರಿಟಿಷ್ ನ್ಯಾಯಾಲಯದ ಮೂಲಕ ಮಕ್ಕಳನ್ನು ಕಸ್ಟಡಿಗೆ ನೀಡುವಂತೆ ಕೋರಿದ್ದರು. ಜೋರ್ಡಾನ್‌ನ ದಿವಂಗತ ಕಿಂಗ್ ಹುಸೇನ್ ಅವರ ಪುತ್ರಿಯಾಗಿರುವ ಹಯಾ, ತನ್ನ ಪತಿಯಿಂದ ‘ಭಯಭೀತಳಾಗಿದ್ದೇನೆ’ ಎಂದು ಹೇಳಿದ್ದರು. ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಗಲ್ಫ್ ಎಮಿರೇಟ್‌ಗೆ ಬಲವಂತವಾಗಿ ಹಿಂದಿರುಗಲು ಆದೇಶಿಸಿದ್ದಾರೆ ಎಂದು ಆರೋಪಿಸಿದ್ದರು.

ಶೇಖ್ ಮೊಹಮ್ಮದ್ (72), ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿಯಾಗಿದ್ದು, ಪ್ರಮುಖ ಕುದುರೆ ತಳಿಗಾರ. ಬ್ರಿಟನ್ನಿನ ರಾಣಿ ಎಲಿಜಬೆತ್–II ಅವರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.