ADVERTISEMENT

ಹಾವಳಿ ಇಟ್ಟ ಕ್ರಿಮಿನಲ್‌ಗಳಿಗೆ ಭಯಾನಕ ಜೈಲು! Video ನೀಡಿದ ಎಲ್ ಸಾಲ್ವಡಾರ್‌ ದೇಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 16:02 IST
Last Updated 1 ಮಾರ್ಚ್ 2023, 16:02 IST
ಜೈಲಿನಲ್ಲಿ ಕೈದಿಗಳು
ಜೈಲಿನಲ್ಲಿ ಕೈದಿಗಳು   

ಬೆಂಗಳೂರು: ಕೆಲ ಸರ್ವಾಧಿಕಾರಿ ರಾಷ್ಟ್ರಗಳಲ್ಲಿ ಆ ರಾಷ್ಟ್ರಾಧ್ಯಕ್ಷರು ತಮ್ಮ ವಿರೋಧಿಗಳನ್ನು ಮಟ್ಟಹಾಕಲು ಅವರನ್ನು ಜೈಲಿಗೆ ಹಾಕಿ ಚಿತ್ರಹಿಂಸೆ ಕೊಡುವುದನ್ನು ಕೇಳಿದ್ದೇವೆ. ಆ ಜೈಲುಗಳ ಕಥೆ ಕೇಳಿದರೇ ಮೈ ನಡುಗುವಂತೆ ಇರುತ್ತವೆ.

ಇನ್ನು ದಕ್ಷಿಣ ಅಮೆರಿಕ, ಮಧ್ಯ ಅಮೆರಿಕದ ಕೆಲ ದೇಶಗಳು ಕ್ರಿಮಿನಲ್ ಚಟುವಟಿಕೆ, ಗ್ಯಾಂಗ್‌ಸ್ಟರ್‌ಗಳ ಕಾಳಗ, ಕರಾಳ ಜೈಲುಗಳ ವ್ಯವಸ್ಥೆಯಿಂದಲೇ ಕುಖ್ಯಾತ ಆಗಿವೆ. ಈಗ ಈ ಸಾಲಿಗೆ, ಅಭಿವೃದ್ಧಿಯಲ್ಲಿ ಮುಂದಿದ್ದರೂ ವ್ಯಾಪಕ ಕ್ರಿಮಿನಲ್ ಚಟುವಟಿಕೆಗಳಿಂದ ಕಂಗೆಟ್ಟಿರುವ ಕೇಂದ್ರ ಅಮೆರಿಕದ ಪಶ್ಚಿಮದಲ್ಲಿರುವ ಎಲ್ ಸಾಲ್ವಡಾರ್ ಕೂಡ ಸೇರಿದೆ.

ಹೌದು, ಎಲ್ ಸಾಲ್ವಡಾರ್‌ದಲ್ಲಿ ಇತ್ತೀಚೆಗೆ ಗ್ಯಾಂಗ್‌ಸ್ಟರ್‌ಗಳ ಅಟ್ಟಹಾಸ ಮುಗಿಲು ಮುಟ್ಟಿದೆ. ಎಲ್ಲೆಂದರಲ್ಲಿ ಕೊಲೆ, ಹಿಂಸಾಚಾರ, ಸುಲಿಗೆ, ಶೂಟೌಟ್, ಹೊಡೆದಾಟ ವ್ಯಾಪಕವಾಗಿದೆ. ಇದರಿಂದ ಆ ದೇಶದ ಅಮಾಯಕರು ಕಂಗೆಟ್ಟು ಹೋಗಿದ್ದಾರೆ.

ADVERTISEMENT

ಮಾರ್ಚ್ 2022 ರಲ್ಲಿ ಗ್ಯಾಂಗ್‌ವಾರ್‌ಗಳ ವಿಷಯವಾಗಿಯೇ ತುರ್ತುಪರಿಸ್ಥಿತಿ ಘೋಷಿಸಿರುವ ಎಲ್ ಸಾಲ್ವಡರೋ ಅಧ್ಯಕ್ಷ ನಯೀಬ್ ಬುಕೆಲೆ ಕ್ರಿಮಿನಲ್‌ಗಳ ವಿರುದ್ಧ ಅಕ್ಷರಶಃ ಯುದ್ಧ ಸಾರಿದ್ದಾರೆ. ಜನವರಿಯಲ್ಲಿ ತುರ್ತು ಪರಿಸ್ಥಿತಿ ಅಂತ್ಯವಾಗಿ ಸುಮಾರು 63 ಸಾವಿರ ಕ್ರಿಮಿನಲ್‌ಗಳನ್ನು ವಾರೆಂಟ್ ಇಲ್ಲದೇ ಬಂಧಿಸಲಾಗಿದೆ. 455 ಗ್ಯಾಂಗ್‌ಸ್ಟರ್‌ಗಳನ್ನು ಬಹಿರಂಗವಾಗಿ ಎನ್‌ಕೌಂಟರ್ ಮಾಡಿ ಸಾಯಿಸಲಾಗಿದೆ.

ಏಕೆ ಈ ವಿಚಾರ ಈಗ ಮುನ್ನೆಲೆಗೆ?

ಎಲ್ ಸಾಲ್ವಡಾರ್ ಆಂತರಿಕ ವಿಚಾರ ಸದ್ಯ ಜಾಗತಿಕವಾಗಿ ಗಮನ ಸೆಳೆದಿದೆ. ಏಕೆಂದರೆ ಕ್ರಿಮಿನಲ್‌ಗಳನ್ನು ಮಟ್ಟ ಹಾಕಿ, ರಾಷ್ಟ್ರದಲ್ಲಿ ಶಾಂತಿ ಸ್ಥಾಪಿಸಲು ಪಣ ತೊಟ್ಟಿರುವ ಹಾಗೂ ಜನಾನುರಾಗಿ ಎಂದು ಹೆಸರಾಗಿರುವ ಎಲ್ ಸಾಲ್ವಡಾರ್‌ ಅಧ್ಯಕ್ಷ ನಯೀಬ್ ಬುಕೆಲೆ ಅವರ ನಿರ್ಧಾರಗಳೇ ಈ ವಿಚಾರ ಮುನ್ನೆಲೆಗೆ ಬರಲು ಕಾರಣವಾಗಿದೆ.

ಫೆ. 24ರಂದು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಬುಕೆಲೆ ಅವರು ಕ್ರಿಮಿನಲ್‌ಗಳನ್ನು ಬೆಚ್ಚಿ ಬೀಳಿಸಿದ್ದಾರೆ. ಏಕೆಂದರೆ, ಆ ದೇಶದಲ್ಲಿನ ಕ್ರಿಮಿನಲ್‌ಗಳಿಗೆ ಇಡೀ ಅಮೆರಿಕ ಖಂಡದಲ್ಲಿಯೇ ಅತ್ಯಂತ ದೊಡ್ಡ ಹಾಗೂ ಭಯಾನಕ ಜೈಲು ಕಟ್ಟಿದ್ದಾರೆ.

ಅದರ ಉದ್ಘಾಟನೆಯಂಬಂತೆ ಇತ್ತೀಚೆಗೆ ಬರೋಬ್ಬರಿ 2ಸಾವಿರ ಕೈದಿಗಳನ್ನು (ಅಂತರಾಷ್ಟ್ರೀಯ ಮಟ್ಟದ ಭಯೋತ್ಪಾದಕರು ಎಂದು ಹೆಸರಿಸಲಾದ ‘ಎಂಎಸ್ 13’, ‘18th ಸ್ಟ್ರೀಟ್’ ಎಂಬ ಗ್ಯಾಂಗ್‌ನ ಸದಸ್ಯರು) ಆ ಜೈಲಿಗೆ ಸ್ಥಳಾಂತರಿಸುವ ಹಾಗೂ ಜೈಲಿನ ವಿಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.

ಗ್ಯಾಂಗ್‌ಸ್ಟರ್‌ಗಳು, ಅವರ ಸದಸ್ಯರನ್ನು ತಲೆಬೋಳಿಸಿ ಕೇವಲ ಚಡ್ಡಿಯಲ್ಲಿ ನಿಲ್ಲಿಸಿ ಅವರನ್ನು ಬ್ಯಾರಕ್‌ಗೆ ಅಟ್ಟುವ ಹಾಗೂ ಜೈಲು ಒಳಗೆ ಹೇಗಿದೆ? ಎಂಬುದನ್ನು ತೋರಿಸುವ ವಿಡಿಯೊ ಅದಾಗಿದೆ. ಕೈದಿಗಳು ಆಯಾ ಗ್ಯಾಂಗ್‌ ಟ್ಯಾಟೂವನ್ನು ಹಾಕಿಸಿಕೊಂಡಿರುವುದು ಅದರಲ್ಲಿ ಕಂಡು ಬರುತ್ತದೆ. ಭದ್ರತಾ ಪಡೆಯ ಅಧಿಕಾರಿಗಳ ಗುಂಡಿನ ನಳಿಕೆಯಡಿ ಕ್ರಿಮಿನಲ್‌ಗಳು ಮೈ ಬಗ್ಗಿಸಿ ಓಡುವ ಸನ್ನಿವೇಶಗಳು ಗಮನ ಸೆಳೆದಿವೆ.

ಮೈ ನಡುಗಿಸುವ ಜೈಲು

ಎಲ್ ಸಾಲ್ವಡಾರ್‌ ರಾಜಧಾನಿ ‘ಸ್ಯಾನ್ ಸಾಲ್ವಡಾರ್‌’ದಿಂದ ಆಗ್ನೇಯಕ್ಕೆ 74 ಕಿ.ಮೀ ದೂರ ಇರುವ ಟೆಕೊಲುಕಾದಲ್ಲಿನ ನಿರ್ವಸತಿ ಪ್ರದೇಶದಲ್ಲಿ ಅತ್ಯಂತ ದೊಡ್ಡ ಜೈಲನ್ನು ಹೊಸದಾಗಿ ಕಟ್ಟಲಾಗಿದೆ. ವಿಶಾಲವಾದ ಬ್ಯಾರಾಕ್‌ಗಳಲ್ಲಿ 1025 ಚದರ ಅಡಿಗೆ ಒಂದರಂತೆ 32 ಸೆಲ್‌ಗಳನ್ನು ಮಾಡಲಾಗಿದೆ. ಒಂದು ಸೆಲ್‌ನಲ್ಲಿ ಬರೋಬ್ಬರಿ 100 ಕೈದಿಗಳನ್ನು ತುರುಕಲು ವ್ಯವಸ್ಥೆ ಮಾಡಲಾಗಿದೆ.

ಸರಿಯಾಗಿ ಗಾಳಿ ಬೆಳಕು ಬರದ ಸೆಲ್‌ಗಳನ್ನು ಉದ್ದೇಶಪೂರ್ವಕವಾಗಿಯೇ ನಿರ್ಮಿಸಲಾಗಿದ್ದು, ಊಟಕ್ಕೆ ಮಾತ್ರ ಕೈದಿಗಳು ಡೈನಿಂಗ್ ಏರಿಯಾಕ್ಕೆ ಹೋಗಬೇಕಿದೆ. ಉಳಿದಂತೆ ಒಂದು ಸೆಲ್‌ನಲ್ಲಿ ಕೇವಲ 2 ಸಿಂಕ್ ಮತ್ತು 2 ಟಾಯ್ಲೆಟ್‌ಗಳನ್ನು ಒದಗಿಸಲಾಗಿದೆ!

ಜೈಲಿನಲ್ಲಿ ಜಿಮ್, ಥಿಯೇಟರ್, ಒಳಾಂಗಣ ಕ್ರೀಡಾಂಗಣ, ಈಜುಕೊಳದಂತಹ ಎಲ್ಲ ಆಧುನಿಕ ಸೌಲಭ್ಯಗಳು ಇದ್ದು ಅವು ಜೈಲಿನ ಸಿಬ್ಬಂದಿಗೆ ಮಾತ್ರ ಮೀಸಲಿಡಲಾಗಿದೆ.

ಕ್ರಿಮಿನಲ್‌ಗಳನ್ನು ವಾರೆಂಟ್ ಇಲ್ಲದೇ ಬಂಧಿಸಲಾಗುತ್ತಿರುವುದರಿಂದ ಅವರಿಗೆ ವಕೀಲರ ನೆರವನ್ನು ಸರ್ಕಾರ ರದ್ದು ಮಾಡಿದೆ. ಕೈದಿಗಳು ಜೈಲಿನ ವಿಶೇಷ ಕೋಣೆಯ ಮೂಲಕ ಹಾಜರಾಗಿ ವಿಡಿಯೊ ಕಾನ್ಪರೆನ್ಸ್‌ ಮೂಲಕವೇ ತಮ್ಮ ಮೇಲಿನ ಆರೋಪಗಳಿಗೆ ನ್ಯಾಯಾಧೀಶರಿಗೆ ಸ್ಪಷ್ಟನೆ ನೀಡಬೇಕಿದೆ. ಈ ಜೈಲಿಗೆ 40,000 ಕೈದಿಗಳನ್ನು ಸೇರಿಸಲಾಗುತ್ತಿದೆ.

ಪುಟ್ಟ ರಾಷ್ಟ್ರದಲ್ಲಿ ಗ್ಯಾಂಗ್‌ಸ್ಟರ್‌ಗಳ ಹಾವಳಿ

ಎಲ್ ಸಾಲ್ವಡಾರ್‌ 65 ಲಕ್ಷ ಜನಸಂಖ್ಯೆ ಇರುವ ಪುಟ್ಟ ರಾಷ್ಟ್ರ. ಆದರೆ, ಪಕ್ಕದ ರಾಷ್ಟ್ರಗಳಿಗೆ ಅಕ್ರಮ ಶಸ್ತ್ರಾಸ್ತ್ರ ಪೂರೈಸುವ ಗುಂಪುಗಳು, ಡ್ಸಗ್ಸ್ ಸಾಗಣೆ ಗುಂಪುಗಳು, ಗ್ಯಾಂಗ್‌ಸ್ಟರ್‌ಗಳು ಈ ಪುಟ್ಟ ರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಬೆಳದಿವೆ.

ಸರ್ಕಾರದ ಅಂಕಿ–ಅಂಶಗಳ ಪ್ರಕಾರ ಗ್ಯಾಂಗ್‌ವಾರ್‌ಗಳಲ್ಲಿ ಕಳೆದ 2022ರಲ್ಲಿ 495 ಜನರ ಹತ್ಯೆಯಾಗಿದೆ. ಇದರಿಂದ ಅಲ್ಲಿನ ಜನ ನೆಮ್ಮದಿಯ ನಿದ್ದೆಯನ್ನೇ ಕಳೆದುಕೊಂಡಿದ್ದರು. ಇದರಿಂದ ತುರ್ತು ಪರಿಸ್ಥಿತಿ ಘೋಷಿಸಿದ್ದ ಅಧ್ಯಕ್ಷರ ಕ್ರಮಕ್ಕೆ ಅಲ್ಲಿನ ಜನಸಾಮಾನ್ಯರು ಮೆಚ್ಚುಗೆ ಸೂಚಿಸಿದ್ದರು.

ಮಾನವ ಹಕ್ಕುಗಳ ಸಂಘಟೆನಗಳ ವಿರೋಧ

ಎಲ್ ಸಾಲ್ವಡಾರ್‌ದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಎಂದು ಅನೇಕ ಸಂಘಟನೆಗಳು ಆರೋಪಿಸಿವೆ. ವಾರೆಂಟ್ ಇಲ್ಲದೇ ಬಂಧಿಸುವ ಕ್ರಮ ಸರಿಯಲ್ಲ. ಇದರಿಂದ ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಹೋಗಲಿದೆ. ಇದು ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಎಂದು ಕಿಡಿಕಾರಿದ್ದಾರೆ.

ಆದರೆ, ಈ ಆರೋಪಗಳನ್ನು ತಳ್ಳಿ ಹಾಕಿರುವ ಎಲ್‌ ಸಾಲ್ವಡಾರ್‌ ಲೋಕೋಪಯೋಗಿ ಸಚಿವ ರೋಮಿಯೋ ರೋಡ್ರಿಗಸ್, ‘ಕಳೆದ ಒಂದು ವರ್ಷದಿಂದ ಕ್ರಿಮಿನಲ್‌ಗಳ ವಿರುದ್ಧ ಅಧ್ಯಕ್ಷರು ಯುದ್ಧ ಸಾರಿದ್ದು ಯಶಸ್ವಿಯಾಗಿದೆ. ಕೊಲೆ, ಹಿಂಸಾಚಾರಗಳು ಶೇ 57 ರಷ್ಟು ಕಡಿಮೆಯಾಗಿದೆ’ ಎಂದಿದ್ದಾರೆ.

ಒಟ್ಟಾರೆ ಬುಕೆಲೆ ಅವರು ಹಂಚಿಕೊಂಡಿರುವ ವಿಡಿಯೊ ಆ ರಾಷ್ಟ್ರದಲ್ಲಿನ ಕ್ರಿಮಿನಲ್‌ಗಳಲ್ಲಿ ನಡುಕ ಹುಟ್ಟಿಸಿದೆ.

----

ಆಧಾರ– ಫರ್ಸ್ಟ್ ಪೋಸ್ಟ್.ಕಾಮ್ ಹಾಗೂ ಟ್ವಿಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.